ಗೊಂಡ ಕುರುಬ, ಕುರುಬ ಗೊಂಡ ಪರ್ಯಾಯ ಪದಗಳೆಂದು ಪರಿಗಣಿಸಿ: ಕೇಂದ್ರಕ್ಕೆ ಗೊಂಡ ಸಮಾಜದಿಂದ ಮನವಿ

ಬೀದರ್ ಆ.02: ಕೇಂದ್ರ ಸರ್ಕಾರವು ಗೊಂಡ ಕುರುಬ, ಕುರುಬ ಗೊಂಡ ಎರಡು ಪರ್ಯಾಯ ಪದಗಳು ಎಂದು ಪರಿಗಣಿಸಿ ಆದೇಶ ಹೊರಡಿಸಬೇಕೆಂದು ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪುರ್, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪೂರೆ, ಗೊಂಡ ಸಮಾಜದ ಮುಖಂಡರಾದ ಮಾಳಪ್ಪ ಅಡಸಾರೆರವರ ನೇತೃತ್ವದ ನಿಯೋಗ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಕೇಂದ್ರ ಸಚಿವರಾದ ಭಗವಂತ ಖೂಬಾ ಹಾಗೂ ಪ್ರಲ್ಹಾದ್ ಜೋಷಿರವರನ್ನು ಮಂಗಳವಾರ ಬೆಳಗ್ಗೆ ನವದೆಹಲಿಯಲ್ಲಿ ಭೇಟಿಯಾದ ನಿಯೋಗ, ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಬರುವ ಗೊಂಡ ಸಮಾಜವು ಗೊಂಡ ಕುರುಬ, ಕುರುಬ ಗೊಂಡ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಹಾಗಾಗಿ ಗೊಂಡ ಕುರುಬ, ಕುರುಬ ಗೊಂಡ ಎರಡು ಒಂದೇ ಎಂದು ಪರಿಗಣಿಸಬೇಕು ಎಂದು ಮನವಿ ಮಾಡಿತು.

ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಯಲ್ಲಿ ಗೊಂಡ ಸಮಾಜದ ಜನರಿದ್ದು, ಕೆಲವು ಕಡೆಗಳಲ್ಲಿ ಗೊಂಡ ಕುರುಬ ಎನ್ನಲಾಗುತ್ತಿದೆ. ಇನ್ನೂ ಕೆಲವು ಕಡೆ ಕುರುಬ ಗೊಂಡ ಎಂದು ಕರೆಯಲಾಗುತ್ತದೆ. ಎರಡು ಗೊಂಡ ಸಮಾಜದ ಪರ್ಯಾಯ ಪದಗಳಾಗಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಕರ್ನಾಟಕ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಅನೇಕ ಬಾರಿ ಗೊಂಡ ಸಮಾಜದ ನಿಯೋಗ ಮನವಿ ಸಲ್ಲಿಸಿದ್ದು, ಸರ್ಕಾರ ಇದುವರೆಗೂ ಈ ವಿಷಯದಲ್ಲಿ ಆದೇಶ ಹೊರಡಿಸಿಲ್ಲ.

ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ನಮ್ಮ ಭಾಗದಲ್ಲಿರುವ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಎರಡು ಪರ್ಯಾಯ ಪದಗಳೆಂದು ಪರಿಗಣಿಸಿ, ಶೀಘ್ರದಲ್ಲೇ ಆದೇಶ ಹೊರಡಿಸಬೇಕೆಂದು ಬರೆದಿದ್ದ ಮನವಿ ಪತ್ರವನ್ನು ಗೊಂಡ ಸಮಾಜದ ನಿಯೋಗ ಕೇಂದ್ರ ಸಚಿವರಿಗೆ ಸಲ್ಲಿಸಿತು. ಈ ವೇಳೆ ಮಾತನಾಡಿದ ನಿಯೋಗದ ಸದಸ್ಯರು, ಕೇಂದ್ರ ಸರ್ಕಾರ ನಮ್ಮ ಮನವಿಯನ್ನು ಪುರಸ್ಕøರಿಸುವ ವಿಶ್ವಾಸವಿದೆ. ಸಚಿವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದಷ್ಟು ಬೇಗ ಆದೇಶ ಹೊರಬರುವ ಸಾಧ್ಯತೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.