ಗೈರಾದ ಅಧಿಕಾರಿಗಳ ಮೇಲೆ ಕಟ್ಟು ನಿಟ್ಟಿನ ಕ್ರಮ: ಹೆಗ್ಗನ್ನವರ


ಸವಣೂರ,ಜ.9- ಎಲ್ಲ ಇಲಾಖೆಗಳ ಸಹಭಾಗಿತ್ವದಲ್ಲಿ ನಡೆಯಬೇಕಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಟಾಸ್ಕ್ ಫೋರ್ಸ ಸಭೆಗೆ ಗೈರಾಗಿ ಉಳಿದ ವಿವಿಧ ಇಲಾಖೆಗಳ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಬೇಸತ್ತ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ, ಗೈರಾದ ಅಧಿಕಾರಿಗಳ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ನಗರದ ಕಂದಾಯ ಇಲಾಖೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಟಾಸ್ಕ್ ಫೋರ್ಸ ಸಭೆsÉಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹುಟ್ಟಿದ ಮಗುವಿನಿಂದ 5 ವರ್ಷದ ಒಳಗಿನ ಪ್ರತಿಯೊಂದು ಮಗುವಿಗು ಕಟ್ಟು ನಿಟ್ಟಾಗಿ ಪೋಲಿಯೋ ಹನಿಯನ್ನು ಹಾಕಬೇಕು. ಇದರಿಂದ, ಯಾವುದೇ ಮಗು ವಂಚಿತವಾಗದಂತೆ ನಿಗಾ ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ವಿಶ್ವ ಆರೋಗ್ಯ ಸಂಸ್ಥೆಯಿಂದ ಭಾರತ ದೇಶವನ್ನು 2017 ರಲ್ಲಿ ಪೋಲಿಯೋ ಪ್ರಕರಣಗಳು ಕಂಡು ಬರದೆ ಇರುವದರಿಂದ ಪೋಲಿಯೋ ಮುಕ್ತ ಭಾರತ ಎಂದು ಪರಿಗಣಿಸಲಾಗಿದೆ. ಪೋಲಿಯೋ ಲಸಿಕೆ ಕುರಿತು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಡಂಗೂರ ಸಾರಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಚಂದ್ರಕಲಾ ಜೆ. ಮಾತನಾಡಿ, ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ಕಾರ್ಯಕ್ರಮದ ಪೂರ್ವದಲ್ಲಿ ನಡೆಯುವ ಜಾಗೃತಿ ಜಾತಾ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿದೆ. ತಾಲೂಕಿನ ಜನಸಂಖ್ಯೆ 183434 ಇದ್ದು 18804 ಮಕ್ಕಳು ಐದು ವರ್ಷದ ಒಳಗಿನವರಾಗಿದ್ದಾರೆ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಬೇಕಿದೆ. ಶಿಕ್ಷಕರು ಗ್ರಾಮೀಣ ಪ್ರದೇಶದ ಪ್ರತಿ ಮನೆಯ ಸದಸ್ಯರಿಗೆ ಮನವರಿಕೆ ಮಾಡಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವಂತೆ ತಿಳಿಸಬೇಕು. ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ 88 ತಂಡಗಳ ರಚನೆಮಾಡಲಾಗಿದ್ದು, ಒಂದು ತಂಡದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರನ್ನು ಒಳಗೊಂಡು ನಿಯೋಜನೆ ಮಾಡಲಾಗಿದೆ. 5 ತಂಡಕ್ಕೆ ಒಬ್ಬರಂತೆ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ತಾಲ್ಲೂಕಿನ ಎಲ್ಲ ಅಂಗನವಾಡಿ ಕೇಂದ್ರ, ದೇವಸ್ಥಾನಗಳು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಶಿಗ್ಗಾಂವ ರಸ್ತೆ ಸೇರಿದಂತೆ ನಗರದಾದ್ಯಂತ ಆರೋಗ್ಯ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಸಭೆಯಲ್ಲಿ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಮುನಿಯಪ್ಪ ಪಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀದರಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿ.ಆರ್. ಅಂಬಿಗೇರ, ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಪ್ರಕಾಶ ಪೂಜಾರ, ಎಸ್.ಎಫ್.ಹನಕನಹಳ್ಳಿ ಸೇರಿದಂತೆ ಪ್ರಾಥಮಿಕ ಆರೋಗ್ಯ ಸಹಾಯಕರು ಆರೋಗ್ಯ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಇದ್ದರು.