ಗೇಟ್ಸ್‌ನ ಹಿಂದಿಕ್ಕಿದ ಲ್ಯಾರಿ ಎಲಿಸನ್

ನ್ಯೂಯಾರ್ಕ್ (ಅಮೆರಿಕ),ಜೂ.೧೩- ಒರಾಕಲ್ ಸಂಸ್ಥಾಪಕ ಲ್ಯಾರಿ ಎಲಿಸನ್ ಈಗ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿದ್ದು, ೧೨೯.೮ ಬಿಲಿಯನ್ ಡಾಲರ್ ನಿವ್ವಳ ಮೌಲ್ಯದ ಸಂಪತ್ತು ಹೊಂದಿದ್ದಾರೆ. ಈ ಮೂಲಕ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿದ್ದಾರೆ.
ಈ ಕುರಿತು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ವರದಿ ಮಾಡಿದ್ದು, ಎಲಿಸನ್ ಈಗ ಗೇಟ್ಸ್ ಅವರನ್ನು ಹಿಂದೆ ಹಾಕಿದ್ದಾರೆ. ಗೇಟ್ಸ್ ಅವರ ಸಂಪತ್ತಿನ ನಿವ್ವಳ ಮೌಲ್ಯ ಪ್ರಸ್ತುತ ೧೨೯.೧ ಬಿಲಿಯನ್ ಡಾಲರ್ ಆಗಿದೆ. ಎಲಿಸನ್ ಇದೇ ಮೊದಲ ಬಾರಿಗೆ ಶ್ರೀಮಂತರ ಪಟ್ಟಿಯಲ್ಲಿ ಗೇಟ್ಸ್‌ಗಿಂತ ಮೇಲಿದ್ದಾರೆ.
೨೦೧೪ ರಲ್ಲಿ ಒರಾಕಲ್ ಸಿಇಒ ಹುದ್ದೆಯಿಂದ ಕೆಳಗಿಳಿಯುವುದಾಗಿ ಎಲಿಸನ್ ಘೋಷಿಸಿದ್ದರು. ಆದಾಗ್ಯೂ ಅವರು ಕಂಪನಿಯನ್ನು ತೊರೆಯಲಿಲ್ಲ. ನಂತರ ಅವರು ಕಂಪನಿಯ ಅಧ್ಯಕ್ಷ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿಯಾದರು ಮತ್ತು ಅದೇ ಸ್ಥಾನದ ಬಲದಿಂದ ಅವರು ಹೆಚ್ಚಿನ ಸಂಪತ್ತನ್ನು ಸಂಗ್ರಹಿಸಿದ್ದಾರೆ.
ಒರಾಕಲ್‌ನ ಷೇರುಗಳು ಈ ವರ್ಷದಲ್ಲಿ ಇಲ್ಲಿಯವರೆಗೆ ಶೇಕಡಾ ೪೨ ಕ್ಕಿಂತ ಹೆಚ್ಚು ಏರಿಕೆಯಾಗಿವೆ. ಪ್ರಸ್ತುತ ಮಾರುಕಟ್ಟೆಯ ಮುಕ್ತಾಯದ ಅವಧಿಯಲ್ಲಿ ೧೧೬.೫೦ ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿವೆ. ಇಂದು ಬಿಡುಗಡೆಯಾದ ಕಂಪನಿ ಗಳಿಕೆಯ ವರದಿಯ ಪ್ರಕಾರ, ೨೦೨೩ ರ ಆರ್ಥಿಕ ವರ್ಷದಲ್ಲಿ ಒರಾಕಲ್ $ ೫೦ ಶತಕೋಟಿ ಆದಾಯವನ್ನು ಗಳಿಸಿದೆ. ಕಂಪನಿಯ ಮೂಲಸೌಕರ್ಯ ವ್ಯವಹಾರ ಮತ್ತು ಕ್ಲೌಡ್ ಸೇವೆಗಳು ಬೆಳವಣಿಗೆಗೆ ಕಾರಣವಾಗಿವೆ ಎಂದು ಸಿಇಒ ಸಫ್ರಾ ಕ್ಯಾಟ್ಜ್ ಹೇಳಿದ್ದಾರೆ.