ಗೆಹ್ಲೋಟ್ ವಿರುದ್ಧ ಪೈಲಟ್ ಯಾತ್ರೆ

ಜೈಪುರ, ಮೇ.೧೧-ಕಾಂಗ್ರೆಸ್ ನಾಯಕತ್ವ ಮತ್ತು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಬಹಿರಂಗವಾಗಿ ಸೆಡ್ಡು ಹೊಡೆಯುವ ಪಕ್ಷದ ನಾಯಕ ಸಚಿನ್ ಪೈಲಟ್ ಇಂದು ಅಜ್ಮೀರ್‌ನಿಂದ ತಮ್ಮ ‘ಜನಸಂಘರ್ಷ್ ಯಾತ್ರೆ’ ಆರಂಭಿಸಿದ್ದಾರೆ.
ಐದು ದಿನಗಳಲ್ಲಿ ಸುಮಾರು ೧೨೫ ಕಿ..ಮೀ. ಈ ಯಾತ್ರೆ ಸಾಗಲಿದ್ದು, ಇಂದಿನಿಂದ ಅಜ್ಮೀರ್‌ನಿಂದ ಜನಸಂಘರ್ಷ ಯಾತ್ರೆ” ಆರಂಭವಾಗಲಿದೆ. ೧೨೫ ಕಿ.ಮೀ ಕ್ರಮಿಸುವ ಯಾತ್ರೆ ರಾಜಧಾನಿ ಜೈಪುರಕ್ಕೆ ೫ ದಿನದಲ್ಲಿ ತಲುಪಲಿದೆ.
ಇದು ಭ್ರಷ್ಟಾಚಾರ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಈ ಯಾತ್ರೆ ನಡೆಸ ಲಾಗುತ್ತಿದೆ. ರಾಜ್ಯದಲ್ಲಿ ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ನಡುವೆ ಪೈಲಟ್ ಅವರು ಈ ಯಾತ್ರೆ ನಡೆಸುತ್ತಿರುವುದು ಪಕ್ಷಕ್ಕೆ ಇರುಸುಮುರುಸು ತಂದಿದೆ.
ಅಜ್ಮೀರದ ಅಶೋಕ ಉದ್ಯಾನದಿಂದ ಇಂದು ಜನಸಂಘರ್ಷ ಯಾತ್ರೆ ಆರಂಭವಾಗಲಿದೆ. ಇದಕ್ಕೂ ಮೊದಲು ಪೈಲಟ್ ಅವರು ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಲಿದ್ದಾರೆ. ಬಳಿಕ ರಾಜ್ಯ ರಾಜಧಾನಿ ಕಡೆಗೆ ನಡೆಯುವ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬಳಿಕ ಯಾತ್ರೆ ಕಿಶನ್‌ಗಢದ ತೊಲಮಲ್ ಗ್ರಾಮದಲ್ಲಿ ರಾತ್ರಿ ತಂಗಲಿದೆ ಎಂದು ತಿಳಿದು ಬಂದಿದೆ.
ರಾಜಸ್ಥಾನದಲ್ಲಿ ಬಿಜೆಪಿ ಆಡಳಿತದ ಸಮಯದಲ್ಲಿ ನಡೆದ ಭ್ರಷ್ಟಾ ಚಾರದ ಆರೋಪದ ಪ್ರಕರಣಗಳಲ್ಲಿ ಯಾವುದೇ ಕ್ರಮಕೈಗೊಳ್ಳದ ತಮ್ಮದೇ ಪಕ್ಷದ ಸರ್ಕಾರವನ್ನು ಗುರಿಯಾಗಿಸಿಕೊಂಡು ಕಳೆದ ತಿಂಗಳು, ಟೋಂಕ್ ಶಾಸಕ ಹಾಗೂ ಮಾಜಿ ಡೆಪ್ಯೂಟಿ ಸಿಎಂ ಪೈಲಟ್ ಅವರು ಒಂದು ದಿನದ ಉಪವಾಸವನ್ನು ನಡೆಸಿದರು.
ತಮ್ಮ ಮೆರವಣಿಗೆ ಯಾರ ವಿರುದ್ಧವೂ ಅಲ್ಲ, ಆದರೆ ಭ್ರಷ್ಟಾಚಾರದ ವಿರುದ್ಧ ಹಾಗೂ ಕಾಗದದ ಸೋರಿಕೆಯಂತಹ ವಿಷಯಗಳ ವಿರುದ್ಧ ಎಂದು ರಾಜಸ್ಥಾನದ ಮಾಜಿ ಕಾಂಗ್ರೆಸ್ ಮುಖ್ಯಸ್ಥ ಪೈಲಟ್ ಪ್ರತಿಪಾದಿಸಿದ್ದಾರೆ.
ಗೆಹ್ಲೋಟ್ ಹಾಗೂ ಪೈಲಟ್ ಎರಡು ವರ್ಷಗಳಿಗೂ ಹೆಚ್ಚು ಸಮಯದಿಂದ ಸಾರ್ವಜನಿಕವಾಗಿ ಜಗಳವಾಡುತ್ತಿದ್ದಾರೆ. ೨೦೨೦ ರಲ್ಲಿ, ಪೈಲಟ್ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗಾಗಿ ಪಕ್ಷದಲ್ಲಿ ಬಂಡಾಯ ಸಾರಿದ್ದರು. ಆದಾಗ್ಯೂ ಗೆಹ್ಲೋಟ್ ತನ್ನ ಸರ್ಕಾರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಪೈಲಟ್ ಹಾಗೂ ಅವರ ಕೆಲವು ನಿಷ್ಠಾವಂತ ಶಾಸಕರನ್ನು ನಂತರ ರಾಜ್ಯ ಸಂಪುಟದಿಂದ ಹೊರಹಾಕಲಾಗಿತ್ತು.