ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ನ.07:ಸಂತೇಬಾಚಹಳ್ಳಿ ಹೋಬಳಿಯ ಕೆರೆ-ಕಟ್ಟೆಗಳನ್ನು ಹೇಮಾವತಿ ನದಿ ನೀರಿನಿಂದ ತುಂಬಿಸುವ ಗೂಡೇಹೊಸಹಳ್ಳಿ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ಅಗತ್ಯ ಕ್ರಮವಹಿಸುವುದಾಗಿ ಶಾಸಕ ಹೆಚ್.ಟಿ.ಮಂಜು ತಿಳಿಸಿದರು.
ತಾಲೂಕಿನ ಸಂತೇಬಾಚಹಳ್ಳಿ ಗ್ರಾಮದಲ್ಲಿ ಗೆಳೆಯರ ಬಳಗ ಯುವಕರ ಸಂಘದ ವತಿಯಿಂದ ಆಯೋಜಿಸಿದ್ದ 65 ನೇ ಗಣೇಶೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬರಪೀಡಿತ ಸಂತೇಬಾಚಹಳ್ಳಿ ಹೋಬಳಿಯ ಜನರ ನೀರಿನ ಬವಣೆಯನ್ನು ನೀಗಿಸುವ ಸದುದ್ದೇಶದಿಂದ 2018 ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಸುಮಾರು 212 ಕೋಟಿ ರೂ ಅಂದಾಜು ವೆಚ್ಚದ ಗೂಡೇಹೊಸಹಳ್ಳಿ ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿ ಅಗತ್ಯ ಅನುದಾನ ಬಿಡುಗಡೆ ಮಾಡಿದ್ದರು. 2021 ರಲ್ಲಿಯೇ ಮುಕ್ತಾಯಗೊಳ್ಳಬೇಕಾಗಿದ್ದ ಸದರಿ ಕಾಮಗಾರಿ ಇನ್ನೂ ಮುಗಿದಿಲ್ಲ. ನಾಗಮಂಗಲ ತಾಲೂಕಿನ ಮತ್ತಷ್ಟು ಕೆರೆಗಳನ್ನು ಸದರಿ ಯೋಜನೆಯ ವ್ಯಾಪ್ತಿಗೆ ಸೇರಿಸುವಂತೆ ಅಲ್ಲಿನ ಶಾಸಕರು ಈ ಹಿಂದೆ ಪ್ರಸ್ತಾಪಿಸಿದ್ದರು ಇದಕ್ಕೆ ಹೆಚ್ಚುವರಿ 67 ಕೋಟಿ ಅನುದಾನ ಬೇಕಾಗಿದೆ. ಗೂಡೇಹೊಸಹಳ್ಳಿ ಏತ ನೀರಾವರಿ ಯೋಜನೆ ಸ್ಥಗಿತಗೊಂಡಿರುವ ಬಗ್ಗೆ ಬಂದಿರುವ ಪತ್ರಿಕಾ ವರದಿಗಳ ಜೊತೆಯಲ್ಲಿಯೇ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದೇನೆ. ಹೋಬಳಿಯ ಜನರ ಹಿತದೃಷ್ಠಿಯಿಂದ ಸದರಿ ಯೋಜನೆಯನ್ನು ಪೂರ್ಣಗೊಳಿಸುವುದರತ್ತ ನಾನು ಕ್ರಿಯಾಶೀಲನಾಗಿದ್ದೇನೆಂದು ತಿಳಿಸಿದ ಶಾಸಕ ಹೆಚ್.ಟಿ.ಮಂಜು ಸಂತೇಬಾಚಹಳ್ಳಿ ಸರ್ಕಾರಿ ಆಸ್ಪತ್ರೆಗೆ ಇಸಿಜಿ ಮಿಷನ್ ನೀಡಲಾಗಿದೆ. ಇಲ್ಲಿನ ಜನರ ಮನವಿಯ ಮೇರೆಗೆ ತಾಲೂಕು ವೈದ್ಯಧಿಕಾರಿಯಾಗಿದ್ದ ಡಾ.ಮದುಸೂದನ್ ಅವರನ್ನು ಇಲ್ಲಿನ ಆಸ್ಪತ್ರೆಗೆ ಮರು ನಿಯೋಜಿಸಲಾಗಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವ ಪ್ರಯತ್ನ ನಡೆಸುತ್ತಿದ್ದೇನೆಂದರು. ಹೋಬಳಿ ಕೇಂದ್ರವಾದ ಸಂತೇಬಾಚಹಳ್ಳಿ ಗ್ರಾಮದಿಂದ ಸಮೀಪದ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗೆ ಲಿಂಕ್ ರಸ್ತೆ ನಿರ್ಮಿಸುವ ಬಗ್ಗೆಯೂ ಕ್ರಮ ವಹಿಸುವ ಭರವಸೆ ನೀಡಿದ ಶಾಸಕರು ಚಿಕ್ಕ ವಯಸ್ಸಿನಲ್ಲಿಯೇ ಕ್ಷೇತ್ರದ ಜನ ನನಗೆ ಆರ್ಶೀವಾದ ಮಾಡಿ ಶಾಸಕನ ಜವಾಬ್ದಾರಿ ನೀಡಿದ್ದಾರೆ. ರಾಜ್ಯದಲ್ಲಿ ಸರ್ಕಾರ ಯಾವುದೇ ಇರಲಿ. ಶಾಸಕನಾಗಿ ನಾನು ನನ್ನ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಮರೆಯದೆ ಪಕ್ಷಾತೀತವಾಗಿ ಅಭಿವೃದ್ದಿ ಕೆಲಸ ಮಾಡುತ್ತೇನೆಂದರು.
ಕಾಂಗ್ರೆಸ್ ಮುಖಂಡ ಹಾಗೂ ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಮಾತನಾಡಿ ಗ್ರಾಮದ ಯಜಮಾನರಾದ ಶಿವಪ್ಪ ಅವರ ಸಾರಥ್ಯದಲ್ಲಿ 65 ವರ್ಷಗಳಿಂದ ನಿರಂತರವಾಗಿ ಗಣೇಶೋತ್ಸವ ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ನಡೆಯುತ್ತಿದೆ. ತಮ್ಮ 18 ವಯಸ್ಸಿನಲ್ಲಿ ಗೆಳೆಯರ ಬಳಗ ಕಟ್ಟಿದ್ದ ಶಿವಪ್ಪನವರು ತಮ್ಮ ಇಳಿವಯಸ್ಸಿನಲ್ಲಿಯೂ ಅತ್ಯಂತ ಉತ್ಸಾಹದಿಂದ ಗೆಳೆಯರ ಬಳಗದ ಸಾರಥಿಯಾಗಿ ಮುನ್ನೆಡೆಸುತ್ತಿರುವುದು ಶ್ಲಾಘನೀಯ. ಕುರ್ಚಿಗಾಗಿ ಕಚ್ಚಾಟವಿಲ್ಲದೆ ನಿರಂತರ 65 ವರ್ಷಗಳ ಕಾಲ ನಡೆಯುತ್ತಿರುವ ಗೆಳೆಯರ ಬಳಗ ಕೇವಲ ಗಣೆಶೋತ್ಸವಕ್ಕೆ ಮೀಸಲಾಗದೆ ಹೋಬಳಿಯ ಸಮಸ್ಯೆಗಳ ಪರಿಹಾರ ಕೇಂದ್ರವಾಗಿ ಕೆಲಸ ಮಾಡುತ್ತಿದೆ. ಇದೊಂದು ಮಾದರಿ ಸಂಘ ಎಂದು ಶ್ಲಾಘಿಸಿದರು. ಸಂತೇಬಾಚಹಳ್ಳಿ ಹೋಬಳಿಯ ಗ್ರಾಮೀಣ ರಸ್ತೆಗಳು, ಬೆಂಗಳೂರು ಮತ್ತು ಮೈಸೂರು ನಗರಗಳಿಗೆ ನೇರ ಬಸ್ ಸೌಲಭ್ಯ ಇಲ್ಲದಿರುವುದು ಮತ್ತಿತರ ವಿಚಾರಗಳನ್ನು ಪ್ರಸ್ತಾಪಿಸಿದ ಬಿ.ಎಲ್.ದೇವರಾಜು ಮಾಜಿ ಸ್ಪೀಕರ್ ಕೃಷ್ಣ, ಮತ್ತು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಇದೇ ಸಂತೇಬಾಚಹಳ್ಳಿ ಹೋಬಳಿಗೆ ಸೇರಿದ್ದು ರಾಜ್ಯದ ಪ್ರಭಾವಿ ನಾಯಕರಾಗಿದ್ದವರು. ಮಾಜಿ ಸ್ಪೀಕರ್ ಕೃಷ್ಣ 12 ವರ್ಷಗಳ ಹಾಗೂ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ 10 ವರ್ಷಗಳ ಕಾಲ ಕ್ಷೇತ್ರದ ಶಾಸಕರಾಗಿದ್ದವರು. ನಿರಂತರ 22 ವರ್ಷಗಳ ಕಾಲ ಕ್ಷೇತ್ರ ರಾಜಕಾರಣ ಸಂತೇಬಾಚಹಳ್ಳಿ ಹೋಬಳಿಯ ಈ ಇಬ್ಬರು ನಾಯಕರ ಕೈಯಲ್ಲಿದ್ದರೂ ಹೋಬಳಿ ಮಾತ್ರ ನಿರೀಕ್ಷಿತ ಪ್ರಮಾಣದ ಅಭಿವೃದ್ದಿ ಕಾಣಲಿಲ್ಲ. ಒಂದು ಬಸ್ ಸಂಪರ್ಕಕ್ಕೂ ಇಲ್ಲಿನ ಅರ್ಜಿ ಹಿಡಿದು ನಿಲ್ಲಬೇಕಾದ ಪರಿಸ್ಥಿಯಿದೆ. ಸಚಿವ ಚಲುವರಾಯಸ್ವಾಮಿ ಅವರ ಗಮನಕ್ಕೆ ಇಲ್ಲಿನ ಸಮಸ್ಯೆಗಳನ್ನು ತಂದು ಪರಿಹರಿಸುವ ಭರವಸೆ ನೀಡಿದರು.
ತೆಂಡೇಕೆರೆ ಬಳೆಹೊನ್ನೂರು ಶಾಖಾ ಮಠದ ಗಂಗಾಧರ ಶಿವಾಚಾರ್ಯ ಸ್ವಾಮೀಜಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬೆಡದಹಳ್ಳಿ ಪಂಚಭೂತೇಶ್ವರ ಸುಕ್ಷೇತ್ರದ ರುದ್ರಮುನಿ ಸ್ವಾಮೀಜಿ, ರಾಜ್ಯ ಸಣ್ಣ ನೀರಾವರಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಸಿ.ಮೃತ್ಯಂಜಯಸ್ವಾಮಿ, ಮನ್ ಮುಲ್ ನಿರ್ದೇಶಕ ಡಾಲು ರವಿ, ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಗೆಳೆಯರ ಬಳಗದ ಸಂಸ್ಥಾಪಕ ಶಿವಪ್ಪ, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ತಾ.ಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಗೆಳೆಯರ ಬಳಗದ ಅಧ್ಯಕ್ಷ ಗೌಡಜಯಕುಮಾರ್, ಕಾರ್ಯದರ್ಶಿ ಕೃಷ್ಣ, ಸೇರಿದಂತೆ ಹಲವರು ವೇದಿಕೆಯಲ್ಲಿದ್ದು ಮಾತನಾಡಿದರು.