ಗೆಳೆಯರ ಬಳಗದಿಂದ ಅಡುಗೆ ಸಿಬ್ಬಂದಿಗೆ ರೇಷನ್ ಕಿಟ್ ವಿತರಣೆ

ಬಾಗಲಕೋಟ್, ಮೇ.31-ನಗರದ ಬಿ.ವಿ.ವಿ.ಸಂಘದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಕೋವಿಡ್ ಚಿಕಿತ್ಸಾ ಕೇಂದ್ರದ ಅಡುಗೆ ಸಿಬ್ಬಂದಿಗೆ ಬಾಗಲಕೋಟದ ಚಿನ್ಮಯ ಹೆಬ್ಬಾಳ, ಆಕಾಶ ಹಲಕಿ, ರಜತ್ ದಾವಣಗೆರೆ ಮತ್ತು ಇಶಾನ್ ಶಿರಬೂರ ಅವರ ನೇತೃತ್ವದ ಗೆಳೆಯರ ಬಳಗ ರೇಷನ್ ಕಿಟ್ ವಿತರಿಸಿತು.
ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾದ ಕೋವಿಡ್ ಸೋಂಕಿತರಿಗೆ ಕಳೆದೊಂದು ತಿಂಗಳಿನಿಂದ ಪ್ರತಿನಿತ್ಯ ರುಚಿಕಟ್ಟಾದ ಅಡುಗೆ ಸಿದ್ಧಪಡಿಸಿ ಉಣಬಡಿಸುತ್ತಿರುವ ಅಡುಗೆ ಸಿಬ್ಬಂದಿಯ ಕಾರ್ಯವನ್ನು ಮೆಚ್ಚಿ ಈ ಯುವ ಗೆಳೆಯರು 50 ರೇಷನ್ ಕಿಟ್‍ಗಳನ್ನು ವಿತರಿಸಿ ತಮ್ಮ ಸಾಮಾಜಿಕ ಕಾಳಜಿ ಮೆರೆದಿರುವರು. ಬಿ.ವಿ.ವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಅವರು ಗೆಳೆಯರ ಬಳಗದಿಂದ ರೇಷನ್ ಕಿಟ್‍ಗಳನ್ನು ಸ್ವೀಕರಿಸಿ ಕೋವಿಡ್ ಚಿಕಿತ್ಸಾ ಕೇಂದ್ರದ 50 ಅಡುಗೆ ಸಿಬ್ಬಂದಿಗೆ ವಿತರಿಸಿದರು.
ಈ ಸಂದರ್ಭ ಬಿ.ವಿ.ವಿ.ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ (ಬೇವೂರ), ವಸತಿನಿಲಯಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ಬಿ.ವಿ.ವಿ.ಸಂಘದ ಸದಸ್ಯರಾದ ಅಶೋಕ ಕಲ್ಯಾಣಶೆಟ್ಟಿ ಮತ್ತು ಅಶೋಕ ರೇಣುಕಪ್ಪ, ಮೆಡಿಕಲ್ ಕಾಲೇಜ್ ಪ್ರಾಚಾರ್ಯ ಡಾ.ಅಶೋಕ.ಎಸ್.ಮಲ್ಲಾಪೂರ, ವೈದ್ಯಕೀಯ ಅಧೀಕ್ಷಕಿ ಡಾ.ಭುವನೇಶ್ವರಿ ಯಳಮಲಿ ಮತ್ತು ಡಾ.ಆಶಾಲತಾ ಮಲ್ಲಾಪೂರ ಉಪಸ್ಥಿತರಿದ್ದರು.