ಗೆಲುವು ಸೋಲು ಸಾಮಾನ್ಯ: ವಿಜಯರಾಮೇಗೌಡ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಫೆ.29: ಕ್ರೀಡೆಯಲ್ಲಿ ಗೆಲುವು ಮತ್ತು ಸೋಲು ಸಾಮಾನ್ಯವಾಗಿದ್ದು ಗೆದ್ದವರು ಬೀಗದೇ ಸೋತವರು ಕುಗ್ಗದೇ ಸೋಲೇ ಗೆಲುವಿನ ಮೆಟ್ಟಿಲು ಎಂದು ಪ್ರಯತ್ನ ಮಾಡುತ್ತಿರಬೇಕು ಎಂದು ಸಮಾಜ ಸೇವಕ ಕಾಂಗ್ರೆಸ್ ಮುಖಂಡ ವಿಜಯ್ ರಾಮೇಗೌಡ ಸಲಹೆ ನೀಡಿದರು.
ಪುರಸಭಾ ವ್ಯಾಪ್ತಿಯ ಹೊಸಹೊಳಲಿನ ಕೋಟೆ ಭೈರವೇಶ್ವರ ದೇವಾಲಯದ ಆವರಣದಲ್ಲಿ ಪ್ರೀಮಿಯರ್ ಲೀಗ್ ವತಿಯಿಂದ ಆಯೋಜಿಸಿದ್ದ ಶ್ರೀ ಸಿಂಗಮ್ಮದೇವಿ ಕಪ್, ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಸ್ವತಃ ಕ್ರಿಕೆಟ್ ಆಡುವ ಮೂಲಕ ಮಾತನಾಡಿದರು.
ಯುವಕರು ಹೆಚ್ಚಾಗಿ ಮೊಬೈಲ್ ಬಳಸದೇ ಕ್ರೀಡೆಗಳ ಕಡೆ ಗಮನ ಹರಿಸಬೇಕು ಮಾನಸಿಕವಾಗಿ,ದೈಹಿಕವಾಗಿ ಸದೃಢಗೊಳ್ಳಲು ಕ್ರೀಡೆ ಬಹಳ ಮುಖ್ಯ ಆಗಿವೆ. ವಿದ್ಯಾರ್ಥಿ ಜೀವನದ ಹಂತದಲ್ಲಿರುವವರು ಪಠ್ಯದ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಂಸ್ಕೃತಿಕ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಯುವಕರು ದುಶ್ಚಟಗಳಿಂದ ದೂರ ಇರಬೇಕು. ಉತ್ತಮ ಆರೋಗ್ಯಕ್ಕೆ ಕ್ರೀಡೆ, ವ್ಯಾಯಾಮ, ಪ್ರಾಣಾಯಾಮ ಹಾಗೂ ದೈಹಿಕ ಕಸರತ್ತು ಮಾಡಬೇಕು ಆದರೆ ಇಂದಿನ ಪರಿಸ್ಥಿತಿಯಲ್ಲಿ ಕೆಲವು ಯುವಕರು ಮಾದಕ, ಮದ್ಯಪಾನ, ಧೂಮಪಾನ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಹೆತ್ತವರು ಮಕ್ಕಳ ಮೇಲೆ ಅನೇಕ ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಪೆÇೀಷಕರ ಕನಸುಗಳಿಗೆ ತೊಂದರೆ ಮಾಡದಂತೆ ಯುವಕರು ಜೀವನದ ಬಗ್ಗೆ ಎಚ್ಚರವಹಿಸಬೇಕು ಎಂದು ವಿಜಯ್ ರಾಮೇಗೌಡ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಮಾಧವಪ್ರಸಾದ್, ವಿಜಯ್ ರಾಮೇಗೌಡ ಆಪ್ತ ಸಹಾಯಕ ಬಸವರಾಜು, ಆಯೋಜಕರಾದ ವಿಜಯ್ ಕುಮಾರ್, ಪ್ರಭು, ಪುನೀತ್, ಮನು, ಶಿವಕುಮಾರ್, ಅಚ್ಚು, ಚಿರಂತ್, ವಂಶಿ, ಮಂಜು, ಅಜಯ್, ಪ್ರದೀಪ್ ಸೇರಿದಂತೆ ಇತರರು ಭಾಗವಹಿಸಿದ್ದರು.