ಗೆಲುವಿಗಾಗಿ ಪಂಜಾಬ್, ರಾಜಸ್ಥಾನ ಸೆಣಸಾಟ

ಅಬುಧಾಬಿ, ಅ ೨೯ – ಇಂಡಿಯನ್ ಪ್ರೀಮಿಯರ್ ಲೀಗ್ ೧೩ನೇ ಆವೃತ್ತಿಯ ೫೦ನೇ ಪಂದ್ಯದಲ್ಲಿ ಇಂದು ಮುಖಾಮುಖಿಯಾಗುತ್ತಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಪ್ಲೇ ಆಫ್ ಪ್ರವೇಶದ ಹಾದಿಯನ್ನು ಹಸಿರಾಗಿರಿಸಿಕೊಳ್ಳಲು ಗೆಲ್ಲಲಬೇಕಾದ ಒತ್ತಡದಲ್ಲಿವೆ.
ಆಡಿರುವ ೧೨ ಪಂದ್ಯಗಳಲ್ಲಿ ತಲಾ ೬ ಜಯ, ಸೋಲಿನ ಮಿಶ್ರ ಫಲ ಕಂಡಿರುವ ಕೆ.ಎಲ್. ರಾಹುಲ್ ಬಳಗ ೧೨ ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಸದ್ಯ ನಾಲ್ಕನೇ ಸ್ಥಾನದಲ್ಲಿದೆ. ಅತ್ತ ಇಷ್ಟೇ ಪಂದ್ಯಗಳಿಂದ ೫ ಜಯ, ೭ ಸೋಲು ಕಂಡಿರುವ ಸ್ಮಿತ್ ಬಳಗಕ್ಕೆ ಪ್ಲೇ ಆಫ್ ಹಂತವನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಈ ಪಂದ್ಯದ ಗೆಲುವು ಅತ್ಯಗತ್ಯ. ಒಂದು ವೇಳೆ ಸೋತರೆ ಸ್ಮಿತ್ ಪಡೆಯ ಪ್ಲೇಆಫ್ ಕನಸು ಭಗ್ನಗೊಳ್ಳಲಿದೆ.
ಬುಧವಾರ ಬೆಂಗಳೂರು ವಿರುದ್ಧ ೫ ವಿಕೆಟ್ ಜಯ ಸಾಧಿಸಿದ ಮುಂಬೈ ೧೬ ಅಂಕಗಳೊಂದಿಗೆ ಪ್ಲೇಆಫ್ ಹಂತವನ್ನು ಬಹುತೇಕ ಖಾತರಿಪಡಿಸಿಕೊಂಡಿದೆ. ಆದರೆ ಉಳಿದ ಮೂರು ಸ್ಥಾನಗಳಿಗೆ ಆರು ತಂಡಗಳು ತೀವ್ರ ಪೈಪೋಟಿ ಒಡ್ಡಿವೆ. ಹೀಗಾಗಿ ಉಳಿದ ಲೀಗ್ ಪಂದ್ಯಗಳು ಎಲ್ಲ ತಂಡಗಳಿಗೂ ನಿರ್ಣಾಯಕ ಎನಿಸಿವೆ.
ಸೆಪ್ಟೆಂಬರ್ ೨೭ರಂದು ಇತ್ತಂಡಗಳು ಮುಖಾಮುಖಿಯಾಗಿದ್ದ ವೇಳೆ ರಾಜಸ್ಥಾನ್ ತಂಡ ೪ ವಿಕೆಟ್ ಗಳ ಜಯ ಗಳಿಸಿತ್ತು. ಆದರೀಗ ಸತತ ಐದನೇ ಜಯದ ಆತ್ಮವಿಶ್ವಾಸದಲ್ಲಿ ತೇಲುತ್ತಿರುವ ಪಂಜಾಬ್ ಗೆಲುವಿನ ನಾಗಲೋಟವನ್ನು ವಿಸ್ತರಿಸುವ ಯೋಜನೆಯಲ್ಲಿದೆ. ಕ್ರಿಸ್ ಗೇಲ್, ಆಸೀಸ್ ಪ್ರವಾಸದಲ್ಲಿ ಸೀಮಿತ ಓವರ್ ಗಳ ಸರಣಿಗೆ ಉಪನಾಯಕನಾಗಿರುವ ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಜತೆಗೆ ವೇಗಿ ಮೊಹಮ್ಮದ್ ಶಮಿ ಉತ್ತಮ ಫಾರ್ಮ್ ನಲ್ಲಿರುವುದು ತಂಡದ ಆತ್ಮಬಲವನ್ನು ಇಮ್ಮಡಿಗೊಳಿಸಿದೆ.
ಪಂದ್ಯ ಆರಂಭ: ರಾತ್ರಿ ೭.೩೦ಕ್ಕೆ
ಸ್ಥಳ: ಶೇಖ್ ಝಾಯೆದ್ ಕ್ರೀಡಾಂಗಣ, ಅಬುಧಾಬಿ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಸಂಭಾವ್ಯ ತಂಡಗಳು
ಪಂಜಾಬ್

ಕೆ.ಎಲ್. ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ಗ್ಲೆನ್ ಮ್ಯಾಕ್ಸ್ ವೆಲ್, ಕರುಣ್ ನಾಯರ್, ಮಂದೀಪ್ ಸಿಂಗ್ ಜೇಮ್ಸ್ ನೀಶಮ್, ದೀಪಕ್ ಹೂಡಾ, ನಿಲೊಲಸ್ ಪೂರನ್, ಕ್ರಿಸ್ ಜೋರ್ಡನ್, ಅರ್ಶ್ ದೀಪ್ ಸಿಂಗ್, ರವಿ ಬಿಷ್ಣೋಯಿ, ಮೊಹಮ್ಮದ್ ಶಮಿ, ಮುರುಗನ್ ಅಶ್ವಿನ್.
ರಾಜಸ್ಥಾನ್ ರಾಯಲ್ಸ್
ಸ್ಟೀವನ್ ಸ್ಮಿತ್ (ನಾಯಕ), ರಿಯಾನ್ ಪರಾಗ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್, ರಾಹುಲ್ ತೆವಾಟಿಯಾ, ಟಾಮ್ ಕರ್ರನ್, ಶ್ರೇಯಸ್ ಗೋಪಾಲ್, ಜೋಫ್ರಾ ಆರ್ಚರ್, ಕಾರ್ತಿಕ್ ತ್ಯಾಗಿ, ರಾಬಿನ್ ಉತ್ತಪ್ಪ.