ಗೆಲುವಿಗಾಗಿ ಅಧಿಕಾರಿಗಳ ದುರ್ಬಳಕೆ: ಬಿಜೆಪಿಯಿಂದ ಚುನಾವಣಾ ಆಯೋಗಕ್ಕೆ ದೂರು


ಸಂಜೆವಾಣಿ ವಾರ್ತೆ
ದಾವಣಗೆರೆ.ಏ.೩೦: ದಾವಣಗೆರೆ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿನ ಗೆಲುವಿಗಾಗಿ ಅಧಿಕಾರಿಗಳ ದುರ್ಬಳಕೆ ನಿಲ್ಲಿಸಬೇಕು. ಪಾರದರ್ಶಕ ಚುನಾವಣೆ ನಡೆಸಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ಕಾನೂನು ಪ್ರಕೋಷ್ಠ ಅಧ್ಯಕ್ಷ ವಸಂತ್ ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತಾರೂಢ ಪಕ್ಷದಿಂದ ಗೆಲುವುಗಾಗಿ ಕೆಲವಾರು ಅಧಿಕಾರಿಗಳ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಆ ಬಗ್ಗೆ ಆಯೋಗಕ್ಕೆ ದೂರು ಸಲ್ಲಿಸಿದ್ದು, ಈಗಾಗಲೇ ಸಂಬಂಧಿತರಿಗೆ ನೋಟಿಸ್ ಸಹ ನೀಡಲಾಗಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಪತಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ಕೆಲವು ಅಧಿ ಕಾರಿಗಳ ಗೆಲುವಿಗಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಸಿಲ್ಲ. ಹಾಗಾಗಿ ಈ ಮಾರ್ಗ ಕಂಡುಕೊಳ್ಳಲಾಗುತ್ತಿದೆ. ಏನೇ ಮಾಡಿದರೂ ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್, ಇತರೆ ಎಲ್ಲ ಕ್ಷೇತ್ರಗಳಲ್ಲಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಜೆಡಿಎಸ್ ಕಾನೂನು ಘಟಕದ ರಾಜ್ಯ ಅಧ್ಯಕ್ಷ ಎ.ಬಿ. ರಂಗನಾಥ್ ಮಾತನಾಡಿ, ಬಸವರಾಜ ಬೊಮ್ಮಾಯಿ ಅಽಕಾರದ ಅವಧಿಯಲ್ಲಿ ವಕೀಲರ ಆರೋಗ್ಯ ಕಾರ್ಯಕ್ರಮಕ್ಕೆ ೩ ಕೋಟಿ ಅನುದಾನ ಒಳಗೊಂಡಂತೆ ಅನೇಕ ಸೌಲಭ್ಯ ನೀಡಲಾಗಿದೆ. ದೇಶದ ಸಮಗ್ರತೆ, ಭದ್ರತೆಗೆ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿ ಆಗಬೇಕು ಎಂದು ಜನರು ಬಯಸುತ್ತಿದ್ದಾರೆ. ಎಲ್ಲ ೨೮ ಕ್ಷೇತ್ರದಲ್ಲಿ ಬಿಜೆಪಿಗೆ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ಬಿಜೆಪಿ ಕಾನೂನು ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಎ.ಸಿ. ರಾಘವೇಂದ್ರ ಮಾತನಾಡಿ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಜಿಲ್ಲಾ ಕಾರ್ಮಿಕಾಧಿಕಾರಿ ಕೊಂಡಜ್ಜಿ ರಸ್ತೆಯಲ್ಲಿ ರಾಜಾರೋಷವಾಗಿಯೇ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಭಾವಚಿತ್ರವಿರುವ ಕಟ್ಟಡ ಕಾರ್ಮಿಕರ ಆರೋಗ್ಯ ಕಾರ್ಡ್ ವಿತರಣೆ ಮಾಡಿಸಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಕೆಲ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಮನೆಗೆ ಭೇಟಿ ನೀಡಿರುವ ಬಗ್ಗೆಯೂ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು.ಬಿ.ಎಂ. ಸತೀಶ್, ಎಚ್.ದಿವಾಕರ್, ಎಚ್.ಎಸ್. ಲಿಂಗರಾಜ್, ಕಾಕನೂರು ಮಂಜಪ್ಪ, ಎಚ್.ಎಸ್. ಯೋಗೇಶ್, ಎಚ್.ಬಿ. ವಿಶ್ವನಾಥ್, ರಾಜೇಶ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.