ಗೆಲವು ಕೆಲ ಯಶಸ್ಸಿನ ನಿಯಮಗಳನ್ನು ಹೊಂದಿವೆ:ನಿರ್ಭಯಾನಂದ ಶ್ರೀಗಳು

ಸೈದಾಪುರ:ಫೆ.4:ಗೆಲವು ಯಶಸ್ಸಿನ ಕೆಲವು ನಿಯಮಗಳನ್ನು ಹೊಂದಿವೆ ಅವುಗಳನ್ನು ಅನುಸರಿಸಿದಾಗ ಮಾತ್ರ ಜೀವನದಲ್ಲಿ ಉತ್ತಮ ಸಾಧನೆ ನಮ್ಮದಾಗುತ್ತದೆ ಎಂದು ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮಿಜೀಗಳು ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಅಲ್ಪದರಲ್ಲಿ ಸುಖವಿಲ್ಲಾ. ಗುರಿ ಸಾಧ್ಯವಾದಷ್ಟು ದೊಡ್ಡದಿರಬೇಕು. ಅವುಗಳನ್ನು ಹಂತಗಳನ್ನಾಗಿ ನಿರ್ಮಾಣ ಮಾಡಿಕೊಂಡು ಪರಿಶ್ರಮ, ಕಟ್ಟು ನಿಟ್ಟಿನ ಬ್ರಹ್ಮಾಚಾರ್ಯ, ಗುರುಭಕ್ತಿ, ಕಲಿಯುವ ವಿಷಯವನ್ನು ಪ್ರೀತಿಸಿ ವೇಳಾಪಟ್ಟಿಯನ್ನು ನಿರ್ಮಾಣ ಮಾಡಿಕೊಂಡು ಶಿಸ್ತಿನಿಂದ ಪ್ರಯತ್ನ ಮಾಡಿದಾಗ ಮಾತ್ರ ಪ್ರತಿಯೊಬ್ಬರು ಉನ್ನತ ಸಾಧನೆ ಮಾಡಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತುಗಳನ್ನು ಹೇಳಿದರು. ವಿದ್ಯಾರ್ಥಿ ದಿಸೆಯಲ್ಲಿ ದಿನದಲ್ಲಿ ಇಪ್ಪತ್ತು ಗಂಟೆ ಓದಬೇಕು. ನಿದ್ದೆಯನ್ನು ಗೆಲ್ಲಬೇಕು. ವಿದ್ಯಾ ಬೇಕು ಅನ್ನುವವರು ಸುಖವನ್ನು ಬಯಸಬಾರದು. ತಂದೆ ತಾಯಿ, ಗುರುಗಳನ್ನು ಭಯ ಭಕ್ತಿಯಿಂದ ಕಾಣಬೇಕು. ಇದಕ್ಕಾಗಿ ಸ್ವಾಮಿ ವಿವೇಕಾನಂದ, ಬುದ್ಧ ಸೇರಿದಂತೆ ಮಹಾನ ಸಾಧಕರ ಆದರ್ಶಗಳನ್ನು ನಮ್ಮದಾಗಿಸಿಕೊಂಡು ಸತತ ಪರಿಶ್ರಮದೊಂದಿಗೆ ಪ್ರಯತ್ನ ಮಾಡಬೇಕು. ಗ್ರಾಮೀಣ ಭಾಗದ ನಿಮ್ಮ ಭವಿಷ್ಯ ಉತ್ತಮವಾಗಲಿ ಎಂದು ಹಾರೈಸಿದರು.
ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಮಾತನಾಡಿ, ಉತ್ತಮ ಸಾಧಕರನ್ನು ನಾವು ನೋಡಿದಾಗ ಅವರಲ್ಲಿ ಅವರದೆಯಾದ ವ್ಯಕ್ತಿತ್ವದ ಗುಣಗಳಿವೆ. ಏಕಾಗ್ರತೆ, ಸತತ ಪರಿಶ್ರಮದಿಂದ ಮಾತ್ರ ಉತ್ತಮ ನಾಗರಿಕರು ನಾವಾಗುತ್ತೇವೆ ಎಂದು ಹೇಳಿದರು.
ಸಂಸ್ಥೆಯ ಮಾಜಿ ಕಾರ್ಯದರ್ಶಿ ಹಾಗೂ ವಿಕಾಸ ಅಕಾಡೆಮಿಯ ಸಂಚಾಲಕರಾದ ಭೀಮಣ್ಣಗೌಡ ಪಾಟೀಲ ಕ್ಯಾತನಾಳ ಮಾತನಾಡಿ, ನಮ್ಮ ಮನವಿಗೆ ಸ್ಪಂದಿಸಿ ಸಮಯದ ಅಭಾವದ ಮಧ್ಯದಲ್ಲಿ ಶ್ರೀಗಳು ಬಂದು ಮಕ್ಕಳಿಗೆ ಉತ್ತಮ ಉಪದೇಶವನ್ನು ನೀಡಿದ್ದಾರೆ. ಇವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ. ಈ ಕಾರ್ಯಕ್ರಮದ ಮಹತ್ವ ಹೆಚ್ಚಾಗುತ್ತದೆ ಎಂದು ಹೇಳಿದರು.
ಪ್ರಾಂಶುಪಾಲ ಜಿ.ಎಂ.ಗುರುಪ್ರಸಾದ ಅಧ್ಯಕ್ಷತೆ ವಹಿಸಿದ್ದರು. ವಿವೇಕಾನಂದ ಆಶ್ರಮದ ವೇಣುಗೋಪಾಲ, ವಿಕಾಸ ಅಕಾಡೆಮಿಯ ಸಂಚಾಲಕರಾದ ಭೀಮಣ್ಣಗೌಡ ಪಾಟೀಲ ಕ್ಯಾತನಾಳ, ಕೋಶಾಧ್ಯಕ್ಷ ಮುಕುಂದಕುಮಾರ ಅಲಿಝಾರ, ಶಿಕ್ಷಣ ಪ್ರೇಮಿ ವೆಂಕಟೇಶ ಪೂರಿ, ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಹಂಪಣ್ಣ ಸಜ್ಜನಶೆಟ್ಟಿ, ಭೀಮಣ್ಣ ವಡವಟ್ ಸೇರಿದಂತೆ ಇತರರಿದ್ದರು. ಕರಬಸಯ್ಯ ದಂಡಿಗಿಮಠ ಸ್ವಾಗತಿಸಿದರು. ಚಂದ್ರಶೇಖರ ಡೊಣ್ಣೆಗೌಡ ನಿರೂಪಿಸಿದರು.