
ಕಲಬುರಗಿ,ಮೇ.13: ಚಿಂಚೋಳಿ ಕ್ಷೇತ್ರದಲ್ಲಿನ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್ ಜಾಧವ್ ಅವರು ಈ ಬಾರಿ ಅತ್ಯಂತ ಪ್ರಯಾಸಕರ ರೀತಿಯಲ್ಲಿ ಮರು ಆಯ್ಕೆಯಾಗಿದ್ದಾರೆ. ಅವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ್ ಅವರು ಪ್ರಬಲ ಪೈಪೋಟಿ ಒಡ್ಡಿರಾದರೂ ಅಂತಿಮವಾಗಿ 858 ಅತ್ಯಲ್ಪ ಮತಗಳಿಂದ ಪರಾಭವಗೊಂಡರು. ಇನ್ನೊಂದು ವಿಶೇಷವೆಂದರೆ ಕ್ಷೇತ್ರದಲ್ಲಿ ಗೆದ್ದ ಪಕ್ಷಕ್ಕೆ ರಾಜ್ಯಾಧಿಕಾರ ಸಿಗುತ್ತದೆ ಎಂಬುದು ಇಲ್ಲಿಯವರೆಗಿನ ಚುನಾವಣೆಗಳು ಸಾಬೀತುಪಡಿಸಿದ್ದವು. ಆದಾಗ್ಯೂ, ಈ ಬಾರಿ 2023ರ ಚುನಾವಣೆಯು ಅದನ್ನು ಹುಸಿಗೊಳಿಸಿದೆ. ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದ್ದು, ಈ ಬಾರಿ ಕಾಂಗ್ರೆಸ್ ಪಕ್ಷವು ಬಹುಮತ ಪಡೆದಿರುವುದರಿಂದ ರಾಜ್ಯಾಧಿಕಾರ ಹಿಡಿಯಲಿದೆ. ಹೀಗಾಗಿ ಈ ಬಾರಿ ಕ್ಷೇತ್ರದಲ್ಲಿ ಗೆದ್ದ ಬಿಜೆಪಿ ಪಕ್ಷವು ಅಧಿಕಾರ ಹಿಡಿಯುವ ಬದಲು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ.
ಕ್ಷೇತ್ರದಲ್ಲಿ ಒಟ್ಟು ಹತ್ತು ಜನ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು. ಒಟ್ಟು 18 ಸುತ್ತುಗಳಲ್ಲಿ ಪ್ರತಿ ಸುತ್ತಿನಲ್ಲಿಯೂ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್ ಜಾಧವ್ ಅವರು ಅಲ್ಪ ಮುನ್ನಡೆಯನ್ನು ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ್ ಅವರ ವಿರುದ್ಧ ಸಾಧಿಸಿದರು. ಕೊನೆಯ ಹಂತದವರೆಗೂ ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಸೋಲಿಸುತ್ತದೆ ಎಂಬ ಕೈ ಪಾಳೆಯದಲ್ಲಿನ ನಿರೀಕ್ಷೆಯನ್ನು ಹುಸಿ ಮಾಡಿತು. ಸುಭಾಷ್ ರಾಠೋಡ್ ಅವರು 69105 ಮತಗಳನ್ನು ಪಡೆದರು.
ಜಾತ್ಯಾತೀತ ಜನತಾದಳದ ಅಭ್ಯರ್ಥಿ ಸಂಜೀವನ್ ಯಾಕಾಪುರ ಅವರು ಕೇವಲ 6555 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಉಳಿದಂತೆ ಬಹುಜನ ಸಮಾಜ ಪಕ್ಷದ ಗೌತಮ್ ಅವರು 1078, ಆಮ್ ಆದ್ಮಿ ಪಕ್ಷದ ಗೌತಮ್ ಅವರು 482, ಕರ್ನಾಟಕ ರಾಷ್ಟ್ರೀಯ ಸಮಿತಿಯ ರಮೇಶ್ ಅವರು 543, ಪಕ್ಷೇತರ ಅಭ್ಯರ್ಥಿಗಳಾದ ಅವಿನಾಶ್ ಅವರು 393, ಶಾಮರಾವ್ ಅವರು 390, ಸಂತೋಷ್ ಅವರು 202, ಸುಭಾಷಚಂದ್ರ ಅವರು 226 ಮತಗಳನ್ನು ಪಡೆದು ಪರಾಭವಗೊಂಡರು.
ಈ ಮೊದಲು ಜರುಗಿದ ಚುನಾವಣೆಯಲ್ಲಿ ಡಾ. ಉಮೇಶ್ ಜಾಧವ್ ಅವರು ಕಾಂಗ್ರೆಸ್ಸಿನಿಂದ ಆಯ್ಕೆಯಾಗಿದ್ದರು. ಸಚಿವ ಸ್ಥಾನ ಸಿಗಲಿಲ್ಲ ಹಾಗೂ ತಮ್ಮ ಕ್ಷೇತ್ರಕ್ಕೆ ಕಾಂಗ್ರೆಸ್ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರಿ ಸಂಸದರಾಗಿದ್ದರು. ಅವರಿಂದ ತೆರವಾದ ಸ್ಥಾನಕ್ಕೆ ಡಾ. ಅವಿನಾಶ್ ಜಾಧವ್ ಅವರನ್ನು ಉಪ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಮಾಡಲಾಯಿತು. ಅವರು ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದರಲ್ಲದೇ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರವೂ ಸಹ ರಾಜ್ಯದಲ್ಲಿ ರಚನೆಯಾಗಲು ಕಾರಣವಾಯಿತು.
ರಾಜ್ಯಾಧಿಕಾರ ಪ್ರತೀತಿ ಹುಸಿ: ಕ್ಷೇತ್ರದಲ್ಲಿ ಯಾವ ಪಕ್ಷವು ಗೆಲ್ಲುತ್ತದೆಯೋ ಅದೇ ಪಕ್ಷ ರಾಜ್ಯದಲ್ಲಿ ಅಧಿಕಾರ ಹಿಡಿಯುತ್ತದೆ ಎಂಬ ಪ್ರತೀತಿಯನ್ನು 2023ರ ಚುನಾವಣೆಯು ಹುಸಿಗೊಳಿಸಿದೆ. ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಗೆದ್ದಿದ್ದು, ರಾಜ್ಯದಲ್ಲಿ ಬಿಜೆಪಿ ಹೀನಾಯ ಸೋಲನ್ನು ಅನುಭವಿಸಿ ಅಧಿಕಾರವನ್ನು ಕಳೆದುಕೊಂಡಿದೆ. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಇದರಿಂದಾಗಿ ಗೆದ್ದ ಪಕ್ಷದ ಸರ್ಕಾರ ಎಂಬ ಮಾತು ಈಗ ಸುಳ್ಳಾಗುವಂತಾಗಿದೆ.
ಡಾ. ವೀರೇಂದ್ರ ಪಾಟೀಲ್ ಅವರು 1957ರಿಂದ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದಾಗಿನಿಂದ ಹಿಡಿದು ಕಳೆದ ಉಪ ಚುನಾವಣೆಯವರೆಗೂ ಇದು ನಿಜವಾಗಿತ್ತು. ಆದಾಗ್ಯೂ, ಈ ಬಾರಿ ಅದು ಹುಸಿಯಾಗಿದೆ. 1957ರಿಂದ 1967ರವರೆಗೆ ಜರುಗಿದ ಚುನಾವಣೆಯಲ್ಲಿ ವೀರೇಂದ್ರ ಪಾಟೀಲ್ ಅವರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ಹ್ಯಾಟ್ರಿಕ್ ಜಯ ಗಳಿಸಿದ್ದರು. ಆಗ ಕ್ರಮವಾಗಿ ಕೆ.ಸಿ.ರೆಡ್ಡಿ, ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ಎಸ್. ನಿಜಲಿಂಗಪ್ಪ, ಬಿ.ಡಿ. ಜತ್ತಿ, ಎಸ್.ಆರ್. ಕಂಠಿ ಅವರು ಮುಖ್ಯಮಂತ್ರಿಗಳಾಗಿದ್ದರು. ಬಳಿಕ 1972ರಿಂದ 1983ರವರೆಗೆ ದೇವೆಂದ್ರಪ್ಪ ಘಾಳೆಪ್ಪ ಅವರು ಕಾಂಗ್ರೆಸ್ಸಿನಿಂದ ಆಯ್ಕೆಯಾಗಿ ಡಿ. ದೇವರಾಜ್ ಅರಸು, ಆರ್. ಗುಂಡೂರಾವ್ ಅವರು ಮುಖ್ಯಮಂತ್ರಿಗಳಾಗಿದ್ದರು.
1989ರಲ್ಲಿ ಕಾಂಗ್ರೆಸ್ಸಿನಿಂದ ವೀರೇಂದ್ರ ಪಾಟೀಲ್ ಅವರು ಕ್ಷೇತ್ರದಿಂದ ಆಯ್ಕೆಯಾಗಿ ಅವರೇ ಮುಖ್ಯಮಂತ್ರಿಗಳಾದರು. 1994ರಲ್ಲಿ ಜಾತ್ಯಾತೀತ ಜನತಾದಳದಿಂದ ವೈಜನಾಥ್ ಪಾಟೀಲ್ ಅವರು ಶಾಸಕರಾದರು. ಆಗ ಎಚ್.ಡಿ. ದೇವೆಗೌಡ ಅವರು ಮುಖ್ಯಮಂತ್ರಿಯಾದರು. 1999ರಲ್ಲಿ ವೀರೇಂದ್ರ ಪಾಟೀಲ್ ಅವರ ಪುತ್ರ ಕೈಲಾಶನಾಥ್ ಪಾಟೀಲ್ ಅವರು ಶಾಸಕರಾದರು. ಆಗ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾದರು.
2004ರಲ್ಲಿ ಕ್ಷೇತ್ರವು ಜಾತ್ಯಾತೀತ ಜನತಾದಳದ ಪಾಲಾಯಿತು. ವೈಜನಾಥ್ ಪಾಟೀಲ್ ಅವರು ಶಾಸಕರಾದರೆ, ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರು. 2008ರಲ್ಲಿ ಮೀಸಲು ಮತಕ್ಷೇತ್ರವಾದ ಬಳಿಕ ಮೊದಲ ಬಾರಿಗೆ ಕ್ಷೇತ್ರದಲ್ಲಿ ಬಿಜೆಪಿ ಗೆದ್ದು, ಸುನೀಲ್ ವಲ್ಲ್ಯಾಪುರೆ ಅವರು ಶಾಸಕರಾದರು. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾದರು. 2013ರಲ್ಲಿ ಕಾಂಗ್ರೆಸ್ಸಿನಿಂದ ಡಾ. ಉಮೇಶ್ ಜಾಧವ್ ಅವರು ಆಯ್ಕೆಯಾಗಿದ್ದರು. ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದರು.
ಉಪ ಚುನಾವಣೆಯಲ್ಲಿಯೂ ನಿಜವಾಯ್ತು!: 2018ರಲ್ಲಿ ಕಾಂಗ್ರೆಸ್ಸಿನಿಂದ ಡಾ. ಉಮೇಶ್ ಜಾಧವ್ ಅವರು ಎರಡನೇ ಬಾರಿಗೆ ಆಯ್ಕೆಯಾದರು. ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾದರು. ಶಾಸಕ ಡಾ. ಉಮೇಶ್ ಜಾಧವ್ ಅವರು ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ, ಬಿಜೆಪಿಯಿಂದ ಲೋಕಸಭೆಗೆ ಆಯ್ಕೆಯಾದರು. ಬಳಿಕ ಉಪ ಚುನಾವಣೆ ಜರುಗಿ ಬಿಜೆಪಿಯಿಂದ ಅವರ ಪುತ್ರ ಡಾ. ಅವಿನಾಶ್ ಜಾಧವ್ ಅವರು ಆಯ್ಕೆಯಾದರು. ಅಚ್ಚರಿಯೆಂದರೆ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾದರು. ಅದಕ್ಕಾಗಿ ಈ ಕ್ಷೇತ್ರವೆಂದರೆ ರಾಜಕೀಯ ಪಕ್ಷಗಳಿಗೆ ಎಲ್ಲಿಲ್ಲದ ರೀತಿಯಲ್ಲಿ ಅಚ್ಚುಮೆಚ್ಚು. ಹೀಗಾಗಿ ಕ್ಷೇತ್ರವನ್ನು ಗೆಲ್ಲಲು ಪಕ್ಷಗಳು ಪೈಪೋಟಿ ಮಾಡುತ್ತಿದ್ದವು. ಆದಾಗ್ಯೂ, ಈ ಬಾರಿಯ ಫಲಿತಾಂಶವು ಅದನ್ನು ಹುಸಿಯಾಗಿಸಿದೆ.