ಗೆದ್ದ ಜೆಡಿಎಸ್ ಶಾಸಕರಿಗೆ ಅಭಿನಂದನೆ

ಕೋಲಾರ,ಮೇ,೧೫-ಕೋಲಾರ ಜಿಲ್ಲೆಯಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಶಾಸಕರು ಸರ್ಕಾರ ರಚನೆಯ ಮಾತುಕತೆಯಲ್ಲಿ ಭಾಗವಹಿಸಲು ಬೆಂಗಳೂರಿಗೆ ತೆರಳಿದ್ದರೆ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಜೆಡಿಎಸ್ ಶಾಸಕರು ತಮ್ಮ ನಿವಾಸಗಳಲ್ಲಿ ವಿಶ್ರಾಂತಿ ಪಡೆದು ಕಾರ್ಯಕರ್ತರ ಯೋಗ ಕ್ಷೇಮ ಮತ್ತು ಕಾರ್ಯಕರ್ತರು ನೀಡಿದ ಅಭಿನಂದನೆ ಸ್ವೀಕರಿಸುತ್ತಿದುದ್ದು ಭಾನುವಾರ ಕಂಡು ಬಂದಿತ್ತು.
ಪ್ರಾರಂಭದಿಂದಲೂ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸುತ್ತೇವೆ ಎಂದು ನಂಬಿದ್ದರು, ಆದರೆ ಗೆಲುವು ಸಾಧಿಸಿದ್ದು ಶ್ರೀನಿವಾಸಪುರ ಕ್ಷೇತ್ರದ ಹಿರಿಯ ಮುತ್ಸದ್ದಿ ಜಿ.ಕೆ.ವೆಂಕಟಶಿವಾರೆಡ್ಡಿ ಮತ್ತು ಮುಳಬಾಗಿಲು ಕ್ಷೇತ್ರದ ಸಂಮೃದ್ದಿ ಮಂಜುನಾಥ್. ಗೆದ್ದೇ ಗೆಲ್ಲುತ್ತೇವೆ ಎಂದಿದ್ದ ಕೋಲಾರ ಕ್ಷೇತ್ರದ ಸಿಎಂಆರ್ ಶ್ರೀನಾಥ್ ಮತ್ತು ಬಂಗಾರಪೇಟೆ ಕ್ಷೇತ್ರ ಎಂ.ಮಲ್ಲೆಶ್ ಬಾಬು. ಮತದಾನ ದಿನವೇ ಈ ಇಬ್ಬರೂ ಗೆಲುವು ನಿಶ್ಚಿತ ಎಂದು ತೀರ್ಮಾನಿಸಿದ್ದರು.
ಮತ ಎಣಿಕೆಯಲ್ಲಿಯೂ ಪ್ರಾರಂಭದಿಂದಲೂ ಮಲ್ಲೇಶ್ ಬಾಬು ಮತ್ತು ಸಿಎಂಆರ್ ಶ್ರೀನಾಥ್ ೧೦ ಸುತ್ತಿನ ಎಣಿಕೆ ತನಕ ಮುನ್ನಡೆ ಸಾಧಿಸಿದರು. ನಂತರ ಹಿನ್ನಡೆಯಾಗುತ್ತಾ ಹೋದರು, ಕೊನೆಗೆ ಗೆದ್ದಿದ್ದು ಮುಳಬಾಗಿಲು ಮತ್ತು ಶ್ರೀನಿವಾಸಪುರ ಕ್ಷೇತ್ರದ ಅಭ್ಯರ್ಥಿಗಳು ಮಾತ್ರ.
ಗೆಲುವು ಸಾಧಿಸಿದ ಅಭ್ಯರ್ಥಿಗಳು ಭಾನುವಾರ ಅವರವರ ನಿವಾಸಗಳಲ್ಲಿ ಕಾರ್ಯಕರ್ತರೊಂದಿಗೆ ಚರ್ಚೆಗಳಲ್ಲಿ ಭಾಗವಹಿಸಿದ್ದರೆ, ಸೋತ ಅಭ್ಯರ್ಥಿಗಳು ಕಾರ್ಯಕರ್ತರಿಂದ ದೂರವಾಗಿ ಸೋಲಲು ಕಾರಣವಾದ ಲೆಕ್ಕಾಚಾರದಲ್ಲಿ ತೊಡಗಿದ್ದರು. ಕೆಲವ ಮುಖಂಡರನ್ನು ಕರೆಸಿಕೊಂಡು ಎಲ್ಲೆಲ್ಲಿ ತೊಂದರೆ ಆಗಿದೆ ಎಂಬುದರ ಬಗ್ಗೆ ವಿಶ್ಲೇಷಿಸಿದರು.
ಕೋಲಾರ ಜಿಲ್ಲೆಯ ಗಡಿ ಭಾಗವಾದ ಪುಂಗನೂರು ಸಮೀಪ ಇರುವ ಬೊಯಿ ಕೊಂಡ ಗಂಗಮ್ಮ ದೇವಸ್ಥಾನಕ್ಕೆ ಮುಳಬಾಗಿಲು, ಶ್ರೀನಿವಾಸಪುರ ಸೇರಿದಂತೆ ಜಿಲ್ಲೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಪರವಾದ ಕಾರ್ಯಕರ್ತರು ತೆರಳಿ ಹರಿಕೆ ಸಲ್ಲಿಸಿ ಅದರ ಹೆಸರಿನಲ್ಲಿ ಭರ್ಜರಿ ಬಾಡೂಟಗಳು ನಡೆದವು. ಶ್ರೀನಿವಾಸಪುರ ಮುಳಬಾಗಿಲು ಕ್ಷೇತ್ರಗಳ ಜನತೆ ಯಾವುದೇ ಚುನಾವಣೆಯಲ್ಲಿ ಅವರ ಅಭ್ಯರ್ಥಿಗಳು ಗೆಲುವು ಸಾಧಿಸಬೇಕಾದರೆ ಬೋಯಿಕೊಂಡ ಗಂಗಮ್ಮ ದೇವರಿಗೆ ಕುರಿ, ಮೇಕೆ, ಕೋಳಿ ಬಲಿ ಕೊಡುವುದಾಗಿ ಹರಿಕೆ ಮಾಡಿಕೊಳ್ಳುತ್ತಾರೆ.
ಅದರಂತೆ ಅಭ್ಯರ್ಥಿಗಳು ಗೆಲುವು ಸಾಧಿಸಿದ ನಂತರ ಊರಿನ ಆಯಾ ಪಕ್ಷದ ಕಾರ್ಯಕರ್ತರು ಟೆಂಪೋಗಳಲ್ಲಿ ದೇವಸ್ಥಾನಕ್ಕೆ ತೆರಳಿ ದೇವರಿಗೆ ಕುರಿ, ಕೋಳಿ ಬಲಿ ಕೊಟ್ಟು ಅಲ್ಲಿಯೆ ಬಾಡೂಟದ ವ್ಯವಸ್ಥೆಯನ್ನು ಮಾಡಿ ಸಂಜೆ ವಾಪಸ್ಸು ಬರುತ್ತಾರೆ. ಮತ ಎಣಿಕೆ ಶನಿವಾರ ನಡೆದ ಕಾರಣ ಭಾನುವಾರ ತಂಡೋಪ ತಂಡಗಳಲ್ಲಿ ಬೋಯಿಕೊಂಡ ಗಂಗಮ್ಮ ದೇವಸ್ಥಾನಕ್ಕೆ ತೆರಳಿ ಕಾರ್ಯಕರ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡರು.