ಗೆದ್ದ ಅಭ್ಯರ್ಥಿಗಳಿಂದ ನಗರದಲ್ಲಿ ಭರ್ಜರಿ ವಿಜಯೋತ್ಸವ

ಬಸವಕಲ್ಯಾಣ:ಡಿ.31:ತಾಲೂಕಿನ 31 ಗ್ರಾಮ ಪಂಚಾಯತಗಳಲ್ಲಿನ 544 ಸ್ಥಾನಗಳಿಗೆ ಡಿಸೆಂಬರ 22ರಂದು ನಡೆದ ಚುನಾವಣೆಯಲ್ಲಿ ಬುಧವಾರ ಫಲಿತಾಂಶ ಹೊರ ಬಿದ್ದಿದ್ದು ಶಾಂತ ರೀತಿಯಲ್ಲಿ ಹಾಗೂ ಬಿಗಿ ಬಂದೋಬಸ್ತ್‍ನಲ್ಲಿ ಅಭ್ಯರ್ಥಿ ಅಥವಾ ಏಜೆಂಟರ ಸಮ್ಮುಖದಲ್ಲಿ ಆಯಾ ಗ್ರಾಪಂಗಳ ಸ್ಥಾನಗಳಿಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಫಲಿತಾಂಶ ಪ್ರಕಟಿಸಲಾಗಿದೆ.

ನಗರದ ರಥ ಮೈದಾನದಲ್ಲಿರುವ ಶ್ರೀ ಬಸವೇಶ್ವರ ಶಾಲೆಯಲ್ಲಿ ಚುನಾವಣಾ ಫಲಿತಾಂಶದ ಪ್ರಕ್ರಿಯೆ ಜರುಗಿತು. ರಥ ಮೈದಾನದ ಮುಂಭಾಗದಲ್ಲಿನ ಗೇಟ್ ಸಂಪೂರ್ಣವಾಗಿ ಮುಚ್ಚಿ ಪೊಲೀಸರನ್ನು ನಿಯೋಜಿಸಿದರು. ಜೊತೆಗೆ ಫಲಿತಾಂಶ ತಿಳಿಯುವದಕ್ಕಾಗಿ ಸ್ಪರ್ಧೆ ಮಾಡಿದ ಅಭ್ಯರ್ಥಿ ಅಥವಾ ಎಜೆಂಟರಿಗೆ ಶಾಲೆಯಲ್ಲಿ ತೆರಳಲು ಅವಕಾಶ ಕಲ್ಪಿಸಲಾಗಿತ್ತು.

ರಥ ಮೈದಾನದ ಮುಂಭಾಗದಲ್ಲಿ ಆಯಾ ಗ್ರಾಪಂನಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪರವಾಗಿ ಸಾವಿರಾರು ಸಮಖ್ಯೆಯಲ್ಲಿ ಜನರು ಆಗಮಿಸಿದರು. ಎತ್ತ ನೋಡಿದರತ್ತ ಜನರ ದಂಡೇ ಕಾಣಿಸುತ್ತಿತ್ತು. ಫಲಿತಾಂಶ ಪ್ರಕಟವಾಗಿ ಅಭ್ಯರ್ಥಿಗಳು ಹೊರಗೆ ಆಗಮಿಸುತ್ತಿದ್ದಂತೆ ಅವರ ಅಭಿಮಾನಿಗಳು, ಸ್ನೇಹಿತರು ಅವರನ್ನು ಕೈ ಕುಲುಕಿ ಸನ್ಮಾನಿಸಿ, ಸಿಹಿ ತಿನ್ನಿಸಿ ಸಂತಸ ಪಟ್ಟರು.

ಅಲ್ಲದೆ ಸೋತ ಅಭ್ಯರ್ಥಿಗಳು ನಿರಾಸೆಯಿಂದ ಹೊರ ನಡೆದರೆ ಕೆಲವರು ಗ್ರಾಮದ ಗೆದ್ದ ತಮ್ಮ ಎದುರಾಳಿಯನ್ನು ಕೈ ಕುಲುಕುವ ದೃಷ್ಯಗಳು ಅಲ್ಲಲ್ಲಿ ಕಂಡು ಬಂದವು. ತಾಲೂಕಿನ ಒಂದೊಂದೇ ಪಂಚಾಯತನ ಅಭ್ಯರ್ಥಿಗಳನ್ನು ಸೌಂಡ್ ಸಿಸ್ಟಮ್‍ಗಳನ್ನು ಕೂಗಲಾಗುತ್ತಿತ್ತು. ಹೀಗಾಗಿ ಕೂಗಿದ ಗ್ರಾಪಂನ ಅಭ್ಯರ್ಥಿಗಳು ಸಾಲಾಗಿ ನಿಂತು ಸ್ಟ್ರಾಂಗ ರೂಮಿನೊಳಗೆ ಹೋಗುತ್ತಿದ್ದರು.

ರಥ ಮೈದಾನದ ಆವರಣದಲ್ಲಿ ಮೊದಲು ಆಗಮಿಸಿದ ಅಭ್ಯರ್ಥಿಗಳು ಸೌಂಡ್ ಸಿಸ್ಟ್‍ಮ್‍ನಲ್ಲಿ ಕೂಗುವ ತನಕ ಕೂಡುತ್ತಿದ್ದರು. ನಂತರ ಶಾಲೆಯ ಒಳಗೆ ತೆರಳುತ್ತಿದ್ದರು. ಜೊತೆಗೆ ಪೊಲೀಸರು ಸ್ಥಳದಲ್ಲಿದ್ದು ಸಾಲಾಗಿ ನಿಲ್ಲುವಂತೆ ಸೂಚಿಸಿ ಕರೆದ ಗ್ರಾಪಂ ಅಭ್ಯರ್ಥಿಗಳನ್ನು ಮಾತ್ರ ಒಳಗೆ ಬಿಡಲಾಗುತ್ತಿತ್ತು. ಜೊತೆಗೆ ಸರಕಾರ ನಿಗದಿ ಮಾಡಿದ ಕೊರೊನಾ ರೂಲ್ಸ್‍ಗಳು ಕೂಡಾ ಇಲ್ಲಿ ಫಾಲೋ ಮಾಡಲಾಯಿತು.

ಸಹಾಯಕ ಆಯುಕ್ತ ಭುವನೇಶ ಪಾಟೀಲ ನೇತ್ರತ್ವದಲ್ಲಿ ತಹಸೀಲ್ದಾರ ಸಾವಿತ್ರಿ ಶರಣು ಸಲಗರ ಅವರ ಸಮ್ಮುಖದಲ್ಲಿ ಚುನಾವಣೆಗೆ ನಿಯೋಜನೆಗೊಂಡ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದರು. ಸಹಾಯಕ ಆಯುಕ್ತರು ಹಾಗೂ ತಹಸೀಲ್ದಾರರು ಯಾವುದೇ ತೊಂದರೆಯಾಗದಂತೆ ಕೌಂಟಿಂಗ್ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಪರಿಸೀಲಿಸುತ್ತದ್ದರು. ಬೆಳಿಗ್ಗೆ 8 ಗಂಟೆಗೆ ಆರಂಭಗೊಂಡ ಕೌಂಟಿಂಗ್ ಮಧ್ಯಾಹ್ನ 2 ಗಂಟೆಯವರೆಗೂ ಜರುಗಿತು.

ಕೌಂಟಿಂಗ್ ಸ್ಥಳದಲ್ಲಿ ಸಿಪಿಐಗಳಾದ ಜೆ.ಎಸ್ ನ್ಯಾಮಗೌಡ, ಮಹೇಶ ಗೌಡ, ಪಿಎಸ್‍ಐಗಳಾದ ಗುರು ಪಾಟೀಲ, ಜೈಶ್ರೀ ಹೊಡಲ್, ಬಸಲಿಂಗಪ್ಪ, ಗೌತಮ ಕಾಂಬಳೆ, ಅರುಣಕುಮಾರ, ವಸೀಮ್ ಪಟೇಲ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದು ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗೃತೆ ವಹಿಸಿದರು.

ಅಧಿಕಾರಿಗಳ ಭೇಟಿ: ನಗರದ ರಥ ಮೈದಾನದಲ್ಲಿನ ಬಸವೇಶ್ವರ ಶಾಲೆಯಲ್ಲಿ ನಡೆದ ಕೌಂಟಿಂಗ್ ಸ್ಫಳಕ್ಕೆ ಜಿಲ್ಲಾಧಿಕಾರಿ ಆರ್ ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್ ನಾಗೇಶ ಭೇಟಿ ನೀಡಿ ಪರಿಸೀಲಿಸಿದರು. ಕೌಂಟಿಂಗ್ ನಡೆಯುವ ರೂಮ್ ಒಳಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು. ಇದಕ್ಕೆ ಸಹಾಯಕ ಆಯುಕ್ತ ಭುವನೇಶ ಪಾಟೀಲ ಹಾಗೂ ತಹಸೀಲ್ದಾರ ಸಾವಿತ್ರಿ ಎಸ್ ಸಲಗರ ಅವರು ಸಾಥ್ ನೀಡಿದರು.


ಒಂದು ಮತ ಅಂತರದಲ್ಲಿ ಮಹಿಳೆ ಗೆಲುವು

ತಾಲೂಕಿನ ಮುಚಳಂಬ ಗ್ರಾಮದ ವಾರ್ಡ 4 ರಲ್ಲಿ ಸಾಮಾನ್ಯ ಮಹಿಳೆ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೇವಲ ಒಂದು ಮತ ಅಂತರದಿಂದ ಮಹಿಳೆಯೊಬ್ಬರು ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಶೋಭಾ ಸೋಮನಾಥ ಅವರು 230 ಮತಗಳು ಪಡೆದರೆ ರೇಖಾ ಚನ್ನಬಸಪ್ಪ ಘಾಳೆ ಅವರು 231 ಮತಗಳು ಪಡೆಯುವ ಮೂಲಕ ಶೋಭಾ ಸೋಮನಾಥ ಅವರ ವಿರುದ್ದ ಒಂದು ಮತ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.


ಎರಡು ಗ್ರಾಪಂ ಸ್ಥಾನಗಳಿಗೆ ಲಾಟರಿ ಮೂಲಕ ಆಯ್ಕೆ

ತಾಹೆರಾ ಮೈನೋದ್ದಿನ್ ಅತ್ತಾರ ಹಾಗೂ ಸವಿತಾ ದೀಪಕ ಗೆಲುವು

ತಾಲೂಕಿನ ಮಂಠಾಳ ಹಾಗೂ ಆಲಗೂಡ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಇಬ್ಬರ ಅಭ್ಯರ್ಥಿಗಳಿಗೆ ಲಕ್ ಎನಿಸಿದರೆ ಇನ್ನುಳಿದ ಇಬ್ಬರು ಅಭ್ಯರ್ಥಿಗಳಿಗೆ ನಿರಾಸೆ ಉಂಟು ಮಾಡಿದೆ. ಮಂಠಾಳ ಗ್ರಾಮದ ವಾರ್ಡ 7ರ ಸಾಮಾನ್ಯ ಸ್ಥಾನಕ್ಕೆ ಸ್ಪರ್ಧೆ ನಡೆಸಿದ ಅನ್ನಪೂರ್ಣ ಪ್ರಭಾಕರ ಕೊರಾಳೆ ಹಾಗೂ ತಾಹೆರಾ ಮೈನೋದ್ದಿನ್ ಅತ್ತಾರ ಅವರು ಇಬ್ಬರು ಸಮಾನವಾಗಿ 509 ಮತಗಳು ಪಡೆದರು. ಅಲ್ಲದೆ ತಾಲೂಕಿನ ಆಲಗೂಡ ಗ್ರಾಮದಲ್ಲಿನ ಜಯಶ್ರೀ ಧರ್ಮಾ ಹಾಗೂ ಸವಿತಾ ದೀಪಕ ಅವರು ಕೂಡಾ ಸಮಾನವಾಗಿ 320 ಮತಗಳು ಪಡೆದಿದ್ದರು.

ಹೀಗಾಗಿ ಸಹಾಯಕ ಆಯುಕ್ತ ಭುವನೇಶ ಪಾಟೀಲ ನೇತ್ರತ್ವದಲ್ಲಿ ತಹಸೀಲ್ದಾರ ಸಾವಿತ್ರಿ ಶರಣು ಸಲಗರ ಅವರ ಸಮ್ಮುಖದಲ್ಲಿ ಮಂಠಾಳ ಹಾಗೂ ಆಲಗೂಡ ಸ್ಥಾನಕ್ಕೆ ಲಾಟರಿ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಿದರು. ಅಭ್ಯರ್ಥಿಗಳ ಮತ್ತು ಏಜೆಂಟರ ಸಮ್ಮುಖದಲ್ಲಿ ನಡೆದ ಪ್ರಕ್ರಿಯೆಯಲ್ಲಿ ಮಂಠಾಳ ಗ್ರಾಪಂಗೆ ತಾಹೆರಾ ಮೈನೋದ್ದಿನ್ ಅತ್ತಾರ ಗೆದ್ದರೆ, ಆಲಗೂಡ ಗ್ರಾಪಂಗೆ ಸವಿತಾ ದೀಪಕ ಅವರು ಗೆಲುವು ತಮ್ಮದಾಗಿಸಿ ಖುಷಿ ಹಂಚಿಕೊಂಡರು.