ಗೆದ್ದವರ ಸಂಭ್ರಮ, ಸೋತವರ ಸಂಕಟ

ಕಲಬುರಗಿ,ಡಿ.30-ಗೆದ್ದ ಅಭ್ಯರ್ಥಿಯನ್ನು ಅವರ ಬೆಂಬಲಿಗರು ಹೆಗಲು ಮೇಲೆ ಹೊತ್ತುಕೊಂಡು ಕುಣಿದಾಡಿದರೆ, ಸೋತ ಅಭ್ಯರ್ಥಿ ಮತ್ತವರ ಬೆಂಬಲಿಗರು ಒಡಲಲ್ಲಿ ಸಂಕಟ ತುಂಬಿಕೊಂಡು ಭಾರವಾದ ಹೆಜ್ಜೆ ಹಾಕುತ್ತ ಹೊರಟಿದ್ದ ದೃಶ್ಯ ಮನ ಕಲಕುವಂತಿತ್ತು.
ಇಂತಹದೊಂದು ಸಂಭ್ರಮ ಮತ್ತು ಸಂಕಟಕ್ಕೆ ಸಾಕ್ಷಿಯಾದದ್ದು ಗ್ರಾಮ ಪಂಚಾಯತಿ ಚುನಾವಣೆಯ ಫಲಿತಾಂಶ. ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಗೆದ್ದ ಅಭ್ಯರ್ಥಿಯನ್ನು ಅವರ ಬೆಂಬಲಿಗರು ಕೊರಳಿಗೆ ಹೂ ಮಾಲೆ ಹಾಕಿ ಹೆಗಲ ಮೇಲೆ ಹೊತ್ತು ಕುಣಿದಾಡಿದರೆ, ಅತ್ತ ಸೋತವರ ಮತ್ತು ತಮ್ಮ ಅಭ್ಯರ್ಥಿಯ ಗೆಲುವಿನ ನರೀಕ್ಷೆಯಲ್ಲಿದ್ದವರ ಮನದಲ್ಲಿ ಸಂಕಟ ಮನೆ ಮಾಡಿತ್ತು.
ಮತ ಎಣಿಕೆ ಕಾರ್ಯ ಬೆಳಿಗ್ಗೆ 8 ಗಂಟೆಗೆ ಆರಂಭವಾಗುವ ವಿಷಯ ತಿಳಿದು ಆಯಾ ತಾಲ್ಲೂಕು ಕೇಂದ್ರಗಳ ಮತ ಎಣಿಕೆ ಕೇಂದ್ರಗಳ ಮುಂದೆ ಅಭ್ಯರ್ಥಿಗಳ ಬೆಂಬಲಿಗರು ಜಮಾವಣೆಗೊಂಡು, ಫಲಿತಾಂಶ ಹೊರ ಬೀಳುವ ನಿರೀಕ್ಷೆಯಲ್ಲಿ ಬೆಳಿಗ್ಗೆಯಿಂದಲೇ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದರು. ಕಡಿಮೆ ಸಂಖ್ಯೆಯ ಮತದಾರರಿದ್ದ ಗ್ರಾಮ ಪಂಚಾಯತಿಗಳ ಚುನಾವಣಾ ಫಲಿತಾಂಶ ಬೇಗನೆ ಹೊರ ಬಿದ್ದ ಕಾರಣ ಗೆದ್ದ ಅಭ್ಯರ್ಥಿಗಳು ಮತ್ತವರ ಬೆಂಬಲಿಗರಲ್ಲಿ ಸಂಭ್ರಮ ಮನೆ ಮಾಡಿತ್ತು.
ಈ ಬಾರಿ ಗ್ರಾ.ಪಂ.ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಗ್ರಾಮೀಣ ಜನರಲ್ಲಿ ಹೊಸ ಹುರುಪು ಮೂಡಿಸಿತ್ತು. ನಾಲ್ಕು ಸ್ಥಾನಗಳಿರುವ ಗ್ರಾಮದಲ್ಲಿ ಹತ್ತಾರು ಜನ ಅಭ್ಯರ್ಥಿಗಳು ಸ್ಪರ್ಧೆಗಿಳಿಯುವುದರ ಮೂಲಕ ಚುನಾವಣಾ ಕಾವು ಹೆಚ್ಚಿಸಿದ್ದರು. ಚುನಾವಣೆಗೆ ಸ್ಪರ್ಧಿಸುವುದೇ ಒಂದು ಪ್ರತಿಷ್ಠೆಯ ವಿಷಯವಾದಂತಾಗಿತ್ತು. ಹಲವಾರು ಜನ ಸಾಲ ಮಾಡಿ ಚುನಾಣೆಗೆ ಸ್ಪರ್ಧಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರೊಬ್ಬರು ಗ್ರಾಮ ಪಂಚಾಯತಿ ಚುನಾಣೆಗೆ ಸ್ಪರ್ಧಿಸುವುದರ ಮೂಲಕ ಅಚ್ಚರಿ ಮೂಡಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆಗೆ ಜನ ಹೆಚ್ಚಿನ ಒತ್ತು ನೀಡಿದ್ದು, ಇದೇ ಮೊದಲೆನೋ ಎನ್ನುವಂತಹ ವಾತಾವರಣ ನಿರ್ಮಾಣವಾಗಿತ್ತು. ಮುಂಬೈ, ಬೆಂಗಳೂರು ಸೇರಿದಂತೆ ಹೊಟ್ಟೆಪಾಡಿಗಾಗಿ ದೊಡ್ಡದೊಡ್ಡ ನಗರಗಳಿಗೆ ವಲಸೆ ಹೋಗಿದ್ದ ಮತದಾರರನ್ನು ಸಹ ಅಭ್ಯರ್ಥಿಗಳು ಹಣ ನೀಡಿ ಕರೆಯಿಸಿಕೊಂಡು ಮತದಾನ ಮಾಡಿಸುವುದರ ಮೂಲಕ ಗಮನ ಸೆಳೆದಿದ್ದರು..