ಗೆಜೆಟೆಡ್ ಅಧಿಕಾರಿ ಆಯ್ಕೆ ಅವ್ಯವಹಾರ : ಪ್ರಾಸಿಕ್ಯೂಷನ್‌ಗೆ ನಿರ್ಧಾರ ಇಲ್ಲ

ಬೆಂಗಳೂರು,ಮೇ ೨೭- ಕರ್ನಾಟಕ ಲೋಕಸೇವಾ ಆಯೋಗದ ೨೦೧೧ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಆಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿರುವ ಕರ್ನಾಟಕ ಲೋಕಸೇವಾ ಆಯೋಗದ ಅಂದಿನ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ಪ್ರಾಸಿಕ್ಯೂಷನ್‌ಗೆ ಒಳಪಡಿಸುವ ನಿರ್ಧಾರವನ್ನು ಕೈಬಿಡಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಸಭೆಯ ತೀರ್ಮಾನಗಳ ವಿವರ ನೀಡಿದ ಗೃಹ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಕೆಪಿಎಸ್‌ಸಿ ಮಾಜಿ ಅಧ್ಯಕ್ಷರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅವಕಾಶ ನೀಡಿಲ್ಲ ಎಂದರು.
ಈ ವಿಚಾರದ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಯಾಗಿ ಪ್ರಾಸಿಕ್ಯೂಷನ್‌ನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಅಲ್ಲದೆ ಪರೀಕ್ಷೆಗೆ ಸೆಕ್ರೆಟರಿ ಎಕ್ಸಾಮಿನೇಷನ್ ಆಥಾರಿಟಿ ಇರುತ್ತಾರೆ. ಹಾಗಾಗಿ ಈ ಪ್ರಸ್ತಾಪ ಕೈ ಬಿಡಲಾಗಿದೆ ಎಂದರು.
ಬಹುಗ್ರಾಮ ಕುಡಿಯುವ ನೀರಿಗೆ ಅಸ್ತು
ಜಲಜೀವನ್ ಮಿಷನ್ ಯೋಜನೆಯಡಿ ರಾಜ್ಯದ ೪೬೪೭ ಗ್ರಾಮೀಣ ಜನವಸತಿ ಹಾಗೂ ೨೭ ಪಟ್ಟಣ ಪ್ರದೇಶಗಳ ೭ ಬೃಹತ್ ಕುಡಿಯುವ ನೀರಿನ ಯೋಜನೆಗಳಿಗೆ ಸಂಪುಟ ಅನುಮೋದನೆ ನೀಡಿದ್ದು, ಈ ಯೋಜನೆಯ ಒಟ್ಟು ಮೊತ್ತ ೬,೭೬೮.೮೫ ಕೋಟಿ ಎಂದು ಅವರು ಹೇಳಿದರು.
ಹಾವೇರಿಯಲ್ಲಿ ಅಲ್ಟ್ರಾ ಪ್ಯಾಕೇಜ್ ಪ್ರಾಡೆಕ್ಟ್ ಯುನಿಟ್‌ನ್ನು ೯೦ ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದರು.
ರಾಜ್ಯದ ಎಲೆಕ್ಟ್ರಿಕ್ ಎನರ್ಜಿ ಸ್ಟೋರೇಜ್ ನೀತಿಗೂ ಒಪ್ಪಿಗೆ ನೀಡಲಾಗಿದ್ದು, ಈ ವಲಯದಲ್ಲಿ ಬಂಡವಾಳ ಹೂಡುವವರಿಗೆ ಶೇ. ೫೦ ರಷ್ಟು ಬಂಡವಾಳ ಸಬ್ಸಿಡಿ ನೀಡಲು ತೀರ್ಮಾನ ಮಾಡಲಾಗಿದೆ ಎಂದರು.