ಗೃಹ ಸಚಿವರ ರಾಜೀನಾಮೆ ಅನಗತ್ಯ: ಸಿಎಂ

ಬೆಂಗಳೂರು,ಜು.೨೯- ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿದ್ದು, ಮಂಗಳೂರಿನಲ್ಲಿ ನೆಡೆದಿರುವ ಹತ್ಯೆಗಳು ಮರುಕಳಿಸದಂತೆ ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಸರಣಿ ಹತ್ಯೆಗಳಿಂದ ಗೃಹ ಸಚಿವರ ರಾಜೀನಾಮೆ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು., ನಿನ್ನೆ ತಾವು ಮಂಗಳೂರಿಗೆ ಹೋಗಿ ವಾಪಸ್ ಬರುವಾಗ ಮತ್ತೊಂದು ಕೊಲೆ ನಡೆದಿದೆ. ಎಲ್ಲ ಮಾಹಿತಿಯನ್ನೂ ಪಡೆದಿದ್ದೇನೆ. ಪ್ರತಿಯೊಂದು ಕೊಲೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.
ಫಾಜಿಲ್ ಕೊಲೆಗೆ ಪ್ರತೀಕಾರ ಕಾರuನಾ? ಎಂಬ ಬಗ್ಗೆ ಮಾಹಿತಿ ಇಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದರು.
ಬೆಂಗಳೂರಿನಲ್ಲಿಂದು ಡಿಜಿ, ಐಜಿಪಿ ಮತ್ತು ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಕರಾವಳಿ ಭಾಗದಲ್ಲಿ ವಿಶೇಷ ಕಠಿಣಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದರು.
ಈ ಕೊಲೆಗಳಿಗೆ ಹಲವು ಆಯಾಮಗಳಿವೆ. ಕೇರಳ ಗಡಿ ಭಾಗಗಳಿಂದಲೂ ದುಷ್ಕರ್ಮಿಗಳು ಬರುತ್ತಿದ್ದಾರೆ. ಕರ್ನಾಟಕದಿಂದ ಕೇರಳಕ್ಕೆ ಸಂಪರ್ಕ ೫೦ ರಸ್ತೆಗಳಿವೆ. ಎಲ್ಲ ಕಡೆ ನಾಕಾಬಂಧಿ ಹಾಕಿ ತಪಾಸಣೆ ಮಾಡುತ್ತೇವೆ. ಹಾಗೆಯೇ ವಿಶೇಷ ಕಠಿಣ ಕ್ರಮ ಜಾರಿ ಮಾಡುವ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದರು.ಈ ಕೊಲೆಗಳಿಗೆ ಸಂಬಂಧಿಸಿದಂತೆ ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಮುಖ್ಯಮಂತ್ರಿಗಳು, ಯಾರ ರಾಜೀನಾಮೆಯೂ ಅಗತ್ಯವಿಲ್ಲ. ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ೩೨ ಸರಣಿ ಕೊಲೆಗಳಾದವು. ಆಗ ಅವರು ಏನು ಮಾಡುತ್ತಿದ್ದರು? ಎಲ್ಲವನ್ನು ರಾಜಕೀಯ ಚಷ್ಮಾದಲ್ಲಿ ನೋಡುವುದಲ್ಲ ಎಂದರು.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಎಸ್‌ಡಿಪಿಐ ಮತ್ತು ಪಿಎಫ್‌ಐ ಮೇಲಿನ ಕೇಸ್ ತೆಗೆದಿದ್ದೇ ಇದಕ್ಕೆಲ್ಲ ಕಾರಣ ಎಂದು ಮುಖ್ಯಮಂತ್ರಿಗಳು ಹೇಳಿದರು.ಸರ್ಕಾರ ಯಾವೆಲ್ಲ ಕ್ರಮಗಳು ಕೈಗೊಳ್ಳುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. ಕೊಲೆಗಳನ್ನು ಯಾವ ರೀತಿ ನಿಭಾಯಿಸಬಹುದು ಎಂಬುದು ನಮಗೆ ಗೊತ್ತಿದೆ. ಸಿದ್ದರಾಮಯ್ಯ ಹೇಳಿಕೆ ವೇದವಾಕ್ಯವಲ್ಲ ಎಂದು ತಿರುಗೇಟು ನೀಡಿದರು.
ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳಿಗೆ ಬಿಜೆಪಿ ಫಂಡ್ ಮಾಡುತ್ತಿದೆ ಎಂಬ ವಿಪಕ್ಷ ನಾಯಕರ ಆರೋಪ ಶುದ್ಧ ಹಾಸ್ಯಾಸ್ಪದ ವಿಚಾರ ಎಂದು ವ್ಯಂಗ್ಯವಾಡಿದರು.ಈ ಕೊಲೆಗಳಿಗೆ ಸಮಾಜಘಾತುಕ ಶಕ್ತಿಗಳ ಕುಮ್ಮಕ್ಕು ಇದೆ. ರಾಜಕೀಯ ಪ್ರೇರಣೆಯೂ ಇದೆ, ಎಲ್ಲ ಆಯಾಮದಿಂದ ತನಿಖೆ ನಡೆದಿದೆ. ಎಲ್ಲವನ್ನೂ ನಿಗ್ರಹಿಸುತ್ತೇವೆ. ವ್ಯವಸ್ಥಿತ ಅಪರಾಧಗಳನ್ನು ಮಟ್ಟ ಹಾಕುವ ಕೆಲಸ ಮಾಡುತ್ತೇವೆ ಎಂದರು.
ಸದ್ಯಕ್ಕೆ ಮಂಗಳೂರಿಗೆ ಹೋಗುವ ವಿಚಾರವಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದರು.
ಅಗತ್ಯ ಬಿದ್ದರೆ ಕಾನೂನಿನ ಚೌಕಟ್ಟಿನಲ್ಲಿ ಯುಪಿ ಮಾದರಿ ಇರಬಹುದು, ಅಥವಾ ಕರ್ನಾಟಕ ಮಾದರಿ ಇರಬಹುದು ಎಲ್ಲ ರೀತಿಯ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಹೇಳಿದರು.