ಗೃಹ ಲಕ್ಷ್ಮೀ ಹಣ ಪಡೆದ ಆರೋಪ; ಕೇಂದ್ರಗಳಿಗೆ ತಹಶಿಲ್ದಾರ ಭೇಟಿ -ಕಟ್ಟುನಿಟ್ಟಿನ ಸೂಚನೆ

ಸಿರವಾರ,ಜು.೨೬-
“ಗೃಹಲಕ್ಷ್ಮೀ ಯೋಜನೆ ನೊಂದಣಿಗೆ ಹಣ; ಸಾರ್ವಜನಿಕರ ಆರೋಪ” ಎಂಬ ತಲೆ ಬರಹದ ಅಡಿಯಲ್ಲಿ ಸೋಮವಾರ “ಸಂಜೆ ವಾಣಿ” ಪತ್ರಿಕೆಯಲ್ಲಿ ವಿಸ್ತೃತ ವರದಿ ಪ್ರಕಟಿಸಲಾದ ಹಿನ್ನೆಲೆಯಲ್ಲಿ ಕೇಂದ್ರಗಳಿಗೆ ತಹಶಿಲ್ದಾರರು ನೊಂದಣಿ ಕೇಂದ್ರಗಳಿಗೆ ಮಂಗಳವಾರ ಭೇಟಿ ನೀಡಿದ್ದಾರೆ.
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸರ್ಕಾರದ ಜನಪ್ರಿಯ ಯೋಜನೆಗಳಲ್ಲಿ ಒಂದಾದ ’ಗೃಹಲಕ್ಷ್ಮಿ’ ಯೋಜನೆಯ ನೊಂದಣಿಗೆ ಸಾರ್ವಜನಿಕರಿಂದ ಹಣ ವಸೂಲಿ ಮಾಡಲಾಗುತ್ತದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ನೊಂದಣಿ ಕೇಂದ್ರಗಳಿಗೆ ಮಂಗಳವಾರ ತಹಶಿಲ್ದಾರ ಸುರೇಶ ವರ್ಮಾ ಭೇಟಿ ನೀಡಿದರು.
ಗೃಹಲಕ್ಷ್ಮಿ ಯೋಜನೆಯ ನೊಂದಣಿ ಸಂಪೂರ್ಣವಾಗಿ ಉಚಿತವಾಗಿದೆ ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್ ಕೇಂದ್ರ ಗಳಲ್ಲಿ ನೊಂದಣಿ ಗೆ ಅವಕಾಶ ಮಾಡಿಕೊಡಲಾಗಿದೆ. ಸಾರ್ವಜನಿಕರಿಂದ ನಯಾ ಪೈಸೆ ಹಣ ಪಡೆಯುವಂತಿಲ್ಲ. ಒಂದು ವೇಳೆ ಪಡೆದದ್ದೇ ಆದಲ್ಲಿ ಅಂತಹ ಕೇಂದ್ರಗಳ ಪರವಾನಗಿ ರದ್ದು ಪಡಿಸುವುದಲ್ಲದೇ ಸೂಕ್ತ ಕಾನೂನು ಕ್ರಮಕ್ಕೆ ಗುರಿಪಡಿಸಲಾಗುವುದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.