ಗೃಹ ಲಕ್ಷ್ಮೀ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ

ಬೆಂಗಳೂರು,ಮೇ.20-ವಿಧಾನಸಭಾ ಚುನಾವಣೆಯ ವೇಳೆ ನೀಡಲಾದ ಗ್ಯಾರಂಟಿಯಂತೆ ಗೃಹ ಲಕ್ಷ್ಮೀ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.ಆ ಮೂಲಕ ಕರ್ನಾಟಕ ರಾಜ್ಯದ ಪ್ರತಿ ಮನೆಯ ಯಜಮಾನಿಯ ಬ್ಯಾಂಗ್ ಖಾತೆಗೆ ಪ್ರತಿ ತಿಂಗಳು ಸರ್ಕಾರದಿಂದ 2 ಸಾವಿರ ರೂ ಬೀಳುವುದು ಗ್ಯಾರಂಟಿಯಾಗಿದೆ.ಗೃಹ ಲಕ್ಷ್ಮೀ ಯೋಜನೆ ಜಾರಿಗೊಳಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸರ್ಕಾರದ ಜಂಟಿ ಕಾರ್ಯದರ್ಶಿ ಬಿಎಂ ಚಂದ್ರಶೇಖರ್ ಆದೇಶ ಹೊರಡಿಸಿದ್ದಾರೆ.ಆದೇಶ ಪತ್ರದಲ್ಲಿರುವಂತೆ, ರಾಜ್ಯದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2ಸಾವಿರ ರೂ. ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲು ತಾತ್ವಿಕ ಅನುಮೋದನೆ ನೀಡಲಾಗಿದ್ದು ಯೋಜನೆಯ ವಿವರವಾದ ರೂಪುರೇಷೆ ಹಾಗೂ ಮಾರ್ಗಸೂಚಿಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು. ಈ ಆದೇಶವನ್ನು ಮೇ 20ರಂದು ನಡೆದ ಸಚಿವ ಸಂಪುಟ ತೀರ್ಮಾನದಂತೆ ಹೊರಡಿಸಲಾಗಿದೆ. ಯೋಜನೆಗೆ ಷರತ್ತುಗಳು ಹಾಗೂ ನಿಯಮಗಳು ಇವೆಯೇ ಎಂಬುದು ಮುಂದಿನ ದಿನಗಳಲ್ಲಿ ತಿಳಿದುಬರಲಿದೆ.