ಗೃಹ ಲಕ್ಷ್ಮೀ ಚಾಲನಾ ಕಾರ್ಯಕ್ರಮದ‌ ನೇರ ಪ್ರಸಾರ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ:ಬಿ.ಫೌಜಿಯಾ ತರನ್ನುಮ್

ಕಲಬುರಗಿ,ಆ.29: ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಮನೆಯೊಡತಿಗೆ ಮಾಸಿಕ‌ 2,000 ಒದಗಿಸುವ “ಗೃಹ ಲಕ್ಷ್ಮೀ” ಜನಪ್ರಿಯ ಯೋಜನೆಗೆ ಆಗಸ್ಟ್ 30 ರಂದು (ಬುಧವಾರ) ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಚಾಲನೆ‌ ನೀಡಲಿದ್ದು, ಸದರಿ ಕಾರ್ಯಕ್ರಮದ ನೇರ ಪ್ರಸಾರಕ್ಕೆ ಜಿಲ್ಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ‌ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಜಿಲ್ಲೆಯ 261 ಗ್ರಾಮ ಪಂಚಾಯತಿ‌ ಕೇಂದ್ರಸ್ಥಾನದಲ್ಲಿ ಮತ್ತು ನಗರ-ಸ್ಥಳೀಯ ಸಂಸ್ಥೆಗಳ 52 ವಾರ್ಡ್ ಸೇರಿದಂತೆ ಒಟ್ಟು 313 ಕಡೆ ಗೃಹ ಲಕ್ಷ್ಮೀ ಚಾಲನಾ ಕಾರ್ಯಕ್ರಮ ನೇರ ಪ್ರಸಾರ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಗೃಹ ಲಕ್ಷ್ಮೀ ಚಾಲನಾ ಕಾರ್ಯಕ್ರಮವು ಸಮುದಾಯ ಭವನ, ಕಲ್ಯಾಣ ಮಂಟಪ, ಚೌಟ್ರಿಯಲ್ಲಿ ಇಲ್ಲವೆ ಬಯಲು ಪ್ರದೇಶದಲ್ಲಿ ಆಯೋಜಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಬರುವ ಫಲಾನುಭವಿ, ಸಾರ್ವಜನಿಕರಿಗೆ ಆಸನ ವ್ಯವಸ್ಥೆ, ಕುಡಿಯುವ ನೀರು, ಲಘು ಉಪಹಾರ ಪೂರೈಸಲಾಗುತ್ತಿದೆ ಎಂದರು.

ಕಾರ್ಯಕ್ರಮದ ಲೈವ್ ಸ್ಟ್ರೀಮಿಂಗ್ ವ್ಯವಸ್ಥೆಗೆ ಎಲ್ಲಾ ಕಾರ್ಯಕ್ರಮ ಸ್ಥಳಗಳಲ್ಲಿ ಎಲ್.ಇ.ಡಿ ವಾಲ್‌, ಸ್ಕ್ರೀನ್ ವ್ಯವಸ್ಥೆ, ಧ್ವನಿವರ್ಧಕ ಅಳವಡಿಸಿ ಇದರ ನಿರ್ವಹಣೆಗೆ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಾರ್ಯಕ್ರಮ ಸುಲಲಿತವಾಗಿ ನಡೆಯಲು ಪ್ರತಿ ಕಾರ್ಯಕ್ರಮ ಸ್ಥಳದಲ್ಲಿ ಓರ್ವ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿಸಿ ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.

4,77,261 ಜನ ನೋಂದಣಿ:

ಆಗಸ್ಟ್ 28ರ ವರೆಗೆ ಜಿಲ್ಲೆಯಲ್ಲಿ ಅಫಜಲಪೂರ-41,553, ಆಳಂದ-57,735, ಚಿಂಚೋಳಿ-45,520, ಚಿತ್ತಾಪೂರ-42,516, ಕಾಳಗಿ-23,207, ಕಲಬುರಗಿ-1,28,179, ಜೇವರ್ಗಿ-35,058, ಯಡ್ರಾಮಿ-23,338, ಸೇಡಂ-39,209, ಕಮಲಾಪೂರ-29,089, ಶಹಾಬಾದ-7,069 ಸೇರಿದಂತೆ ಜಿಲ್ಲೆಯಾದ್ಯಂತ ನಿಗದಿತ ಗುರಿ 5,89,105 ಪೈಕಿ 4,77,261 ಫಲಾನುಭವಿಗಳು (ಶೇ.81.04) ನೋಂದಣಿ ಮಾಡಿಕೊಂಡಿದ್ದಾರೆ. ಬುಧವಾರದಿಂದ ಈ ಎಲ್ಲಾ ಫಲಾನುಭವಿಗಳಿಗೆ ಡಿ.ಬಿ.ಟಿ. ಮೂಲಕ 2,000 ರೂ. ಹಣ ವರ್ಗಾವಣೆಗೆ ಚಾಲನೆ ನೀಡಲಾಗುತ್ತದೆ ಎಂದರು.

ಸಚಿವ‌ ಪ್ರಿಯಾ‌ಂಕ್‌ ಖರ್ಗೆ ಭಾಗಿ:

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಆಳಂದ ರಸ್ತೆಯಲ್ಲಿರುವ ಕಲಬುರಗಿ ತಾಲೂಕಿನ ಭೀಮಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಬಂಗರಗಾ ಕಲ್ಯಾಣ ಮಂಟಪದಲ್ಲಿ ನಡೆಯುವ ಚಾಲನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಡಿ.ಸಿ. ತಿಳಿಸಿದರು.