
ಕಲಬುರಗಿ,ಆ.5-ಸಚಿವಸ್ಥಾನದಿಂದ ವಂಚಿತರಾಗಿರುವುದರಿಂದ ಅಸಮಾಧಾನಗೊಂಡಿರುವ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಪುತ್ರ, ಜೇವರ್ಗಿ ಕ್ಷೇತ್ರದ ಶಾಸಕ ಡಾ.ಅಜಯ್ ಸಿಂಗ್ ಅವರು ಇಂದು ನಗರದ ಎನ್.ವಿ.ಮೈದಾನದಲ್ಲಿ ನಡೆದ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಗೈರು ಹಾಜರಾಗುವ ಮೂಲಕ ಅಸಮಾಧಾನ ಬಹಿರಂಗಪಡಿಸಿದ್ದಾರೆ.
ನಗರದ ಎನ್.ವಿ.ಮೈದಾನದಲ್ಲಿ, ಅದರಲ್ಲೂ ಡಾ.ಅಜಯ್ ಸಿಂಗ್ ಅವರ ಮನೆಗೆ ಹತ್ತಿಕೊಂಡತೆ ನಡೆದಿರುವ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರೆ, ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವರಾದ ಕೆ.ಜೆ.ಜಾರ್ಜ್, ಪ್ರಿಯಾಂಕ್ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ, ಶರಣಬಸಪ್ಪ ದರ್ಶನಾಪುರ, ಈಶ್ವರ ಖಂಡ್ರೆ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು. ಆದರೆ, ಮೂರನೇ ಬಾರಿಗೆ ಶಾಸಕರಾಗಿರುವ ಜೇವರ್ಗಿ ಕ್ಷೇತ್ರದ ಡಾ.ಅಜಯ್ ಸಿಂಗ್ ಮಾತ್ರ ಗೈರು ಹಾಜರಾಗಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ.
ಜಿಲ್ಲೆಯಲ್ಲಿ ಏಳು ವಿಧಾನಸಭಾ ಸದಸ್ಯರಿದ್ದು, ಅವರ ಪೈಕಿ ಪ್ರಿಯಾಂಕ್ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ ಸಚಿವರಾಗಿದ್ದಾರೆ. ಇಬ್ಬರು ಸಚಿವರು ಹಾಗೂ ಉಳಿದ ಶಾಸಕರಾದ ಎಂ.ವೈ.ಪಾಟೀಲ, ಬಿ.ಆರ್.ಪಾಟೀಲ, ಅಲ್ಲಮಪ್ರಭು ಪಾಟೀಲ, ಕನೀಜ್ ಫಾತಿಮಾ ಸೇರಿದಂತೆ ಜಿಲ್ಲೆಯ ಎಂಎಲ್ಸಿ ಪಾಲ್ಗೊಂಡಿದ್ದರು.
ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ರಹಿಂಖಾನ್, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಯಾದಗಿರಿ ಜಿಲ್ಲೆಯ ಶಾಸಕರಾದ ಚೆನ್ನಾರೆಡ್ಡಿ ತುನ್ನೂರ, ಸುರಪುರ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣಪ್ಪ ಕಮಕನೂರ, ಡಾ.ಚಂದ್ರಶೇಖರ ಪಾಟೀಲ, ಅರವಿಂದ ಅರಳಿ ಸೇರಿದಂತೆ ಇತರರೆಲ್ಲರೂ ಪಾಲ್ಗೊಂಡಿದ್ದರು. ವಿಧಾನ ಪರಿಷತ್ ಸದಸ್ಯ ಡಾ.ಅಜಯ್ ಸಿಂಗ್ ಸಹೋದರ ವಿಜಯಸಿಂಗ್ ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆದರೆ ಡಾ.ಅಜಯ್ ಸಿಂಗ್ ಮಾತ್ರ ಗೈರು ಹಾಜರಾಗಿರುವುದು ಪ್ರಮುಖವಾಗಿ ಕಂಡು ಬಂತು.