
ಧಾರವಾಡ, ಆ.31: ಕರ್ನಾಟಕ ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಹೊಸ ಕಲ್ಪನೆಯೊಂದಿಗೆ ಜಾರಿಗೊಳಿಸುತ್ತಿರುವ ಐತಿಹಾಸಿಕ ಯೋಜನೆಗಳು ರಾಷ್ಟ್ರದ ಗಮನ ಸೆಳೆದಿವೆ. ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ ಮತ್ತು ಗೃಹಲಕ್ಷ್ಮೀ ಯೋಜನೆಗಳ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ದವಾಗಿದೆ ಎಂದು ವಿಧಾನ ಪರಿಷತ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ ಅವರು ಹೇಳಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಸಂಯುಕ್ತವಾಗಿ ಹೆಬ್ಬಳ್ಳಿ ಗ್ರಾಮ ಪಂಚಾಯತ ಸಭಾಭವನದಲ್ಲಿ ಆಯೋಜಿಸಿದ್ದ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಿ, ಮಾತನಾಡಿದರು.
ರಾಜ್ಯ ಸರ್ಕಾರವು ನುಡಿದಂತೆ ನಡೆದಿದೆ. ಚುನಾವಣಾ ಪೂರ್ವ ಮತದಾರರಿಗೆ ನೀಡದ್ದ ಐದು ಭರವಸೆಗಳ ಪೈಕಿ ನಾಲ್ಕು ಘೋಷಣೆಗಳನ್ನು ಈಗಾಗಲೆ ಇಡೆರಿಸಿದೆ. ಮತ್ತು ಬರುವ ಡಿಸೆಂಬರ್ ಅಥವಾ ಜನೆವರಿಯಲ್ಲಿ ಐದನೇಯ ಗ್ಯಾರಂಟಿಯನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಧಾರವಾಡ ಜಿಲ್ಲೆಯ 3,39,305 ಫಲಾನುಭವಿಗಳಿದ್ದು, ಈ ಪೈಕಿ ಶೇ. 86 ರಷ್ಟು ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಗೆ ನೋಂದಾಯಿತರಾಗಿದ್ದಾರೆ. ಭ್ರಷ್ಟಾಚಾರ ರಹಿತ ಅಭಿವೃದ್ಧಿ ಪರವಾಗಿರುವ ಆಡಳಿತವನ್ನು ನೀಡುತ್ತೆವೆ ಎಂದು ಅವರು ಹೇಳಿದರು.
ಹೆಬ್ಬಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷ ನಿಂಗಪ್ಪ ಮೊರಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.