ಗೃಹಲಕ್ಷ್ಮೀ ನೋಂದಣಿ ಕೇಂದ್ರ, ಪಾಸ್ ಪೋರ್ಟ್ ಸೇವಾ ಕೇಂದ್ರಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.09:- ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ನಗರದಲ್ಲಿ ಇಂದು ಗೃಹಲಕ್ಷ್ಮೀ ಯೋಜನೆಯ ನೊಂದಣಿ ಕೇಂದ್ರ, ಪಾಸ್ ಪೋರ್ಟ್ ಸೇವಾ ಕೇಂದ್ರ, ಪುಟ್ಟಮ್ಮಣ್ಣಿ ಉದ್ಯಾನವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಸಂತೇಮರಹಳ್ಳಿ ರಸ್ತೆಯಲ್ಲಿರುವ ಉಪ್ಪಾರ ಸಮುದಾಯ ಭವನದಲ್ಲಿ ತೆರೆದಿರುವ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ನೊಂದಣಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಪ್ರಕ್ರಿಯೆಯನ್ನು ವೀಕ್ಷಿಸಿದರು. ಫಲಾನುಭವಿಗಳ ನೊಂದಣಿ ಕಾರ್ಯ ತ್ವರಿತಗೊಳಿಸಬೇಕು. ಅರ್ಹರೆಲ್ಲರಿಗೂ ಸರ್ಕಾರದ ಯೋಜನೆ ತಲುಪಬೇಕಿದೆ. ಹೀಗಾಗಿ ನೊಂದಣಿ ಕಾರ್ಯ ಪ್ರಗತಿಯಾಗುವಂತೆ ನೋಡಿಕೊಳ್ಳಬೇಕು ಎಂದು ಶಾಸಕರು ಸೂಚಿಸಿದರು.
ಪಾರದರ್ಶಕವಾಗಿ ಫಲಾನುಭವಿಗಳ ನೊಂದಣಿಯಾಗಬೇಕು. ದೂರುಗಳು ಬಾರದಂತೆ ನೊಂದಣಿ ಕೆಲಸ ನಿರ್ವಹಿಸಬೇಕು. ಯಾವುದೇ ಲೋಪಗಳಿಗೆ ಅವಕಾಶ ನೀಡಬಾರದೆಂದು ಶಾಸಕರು ತಿಳಿಸಿದರು.
ಬಳಿಕ ಪಾಸ್ ಪೋರ್ಟ್ ಸೇವಾಕೇಂದ್ರಕ್ಕೆ ಶಾಸಕರು ತೆರಳಿ ವೀಕ್ಷಣೆ ಮಾಡಿದರು. ಅಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿದರು. ಸೇವಾ ಕೇಂದ್ರಕ್ಕೆ ಕಾಂಪೌಂಡ್ ನಿರ್ಮಾಣ ಮಾಡಲು ತಮ್ಮ ಶಾಸಕರ ಸ್ಥಳೀಯ ಪ್ರದೆÉೀಶಾಭಿವೃದ್ಧಿ ಯೋಜನೆಯಡಿ 3 ಲಕ್ಷ ರೂ. ಗಳನ್ನು ತಕ್ಷಣವೇ ನೀಡಲಿದ್ದು, ಕೂಡಲೇ ಕಾಮಗಾರಿ ಕೈಗೊಳ್ಳಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತದನಂತರ ಪುಟ್ಟಮ್ಮಣ್ಣಿ ಉದ್ಯಾನವನದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು. ಉದ್ಯಾನವನ ಕಾಮಗಾರಿ ಅಚ್ಚುಕಟ್ಟಾಗಿ ನಡೆಯಬೇಕು.
ವಾಯುವಿಹಾರಿಗಳಿಗೆ ವಾಕಿಂಗ್ ಪಾತ್ ಚೆನ್ನಾಗಿ ನಿರ್ಮಿಸಬೇಕು. ಉದ್ಯಾನವನದ ಎಲ್ಲಾ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಅನುಕೂಲಕ್ಕೆ ಅವಕಾಶ ಮಾಡಿಕೊಡಬೇಕೆಂದು ಶಾಸಕರಾದ ಸಿ. ಪುಟ್ಟರಂಗಶೆÉಟ್ಟಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರಸಭೆ ಆಯುಕ್ತರಾದ ಎಸ್. ವಿ. ರಾಮದಾಸ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಟರಾಜು, ಕಿರಿಯ ಎಂಜಿನಿಯರ್ ಆರಾಧ್ಯ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಇದ್ದರು.