ಗೃಹಲಕ್ಷ್ಮಿ ಯೋಜನೆಯ ತಾಂತ್ರಿಕ ತೊಂದರೆ ನಿವಾರಣೆಗೆ ಜಿಲ್ಲೆಯ 211 ಗ್ರಾ.ಪಂ.ಗಳಲ್ಲಿ ಕ್ಯಾಂಪ್ ಗಳ ಆಯೋಜನೆ:ಸಿಇಒ ರಾಹುಲ್ ಶಿಂಧೆ

ವಿಜಯಪುರ,ಡಿ.26:ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿ ಹೊಂದಿರುವ ಗೃಹಲಕ್ಷ್ಮಿ ಯೋಜನೆಗೆ 19-07-2023 ರಂದು ರಾಜ್ಯಾದ್ಯಂತ ಚಾಲನೆ ನೀಡಲಾಗಿದ್ದು, ಜಿಲ್ಲೆಯ ಕೆಲವು ಫಲಾನುಭವಿಗಳಿಗೆ ತಾಂತ್ರಿಕ ತೊಂದರೆಗಳಿಂದ ಖಾತೆಗಳಿಗೆ ಹಣ ಜಮಾ ಆಗದೇ ಇರುವುದರಿಂದ ಸಮಸ್ಯೆ ನಿವಾರಣೆಗಾಗಿ ಡಿ.27 ರಿಂದ 29ರವರೆಗೆ ಜಿಲ್ಲೆಯ 211 ಗ್ರಾಮ ಪಂಚಾಯತಗಳಲ್ಲಿ ಕ್ಯಾಂಪಗಳನ್ನು ಆಯೋಜಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ 1999 ಫಲಾನುಭವಿಗಳ ಇ-ಕೆವೈಸಿ ಜೋಡಣೆ, ಎನ್ ಪಿಸಿಐ ಫೇಲ್ಡ್ ಅಪ್ಲಿಕೇಶನ್-12464, ಕೆ-2 ಫೇಲ್ಡ್ ಅಪ್ಲಿಕೇಶನ್ ಗಳು-3286 ಒಟ್ಟು17,149 ಗೃಹಲಕ್ಷ್ಮಿ ಫಲಾನುಭವಿಗಳ ತಾಂತ್ರಿಕ ಸಮಸ್ಯೆಗಳು ಕಂಡುಬಂದಿದೆ. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಲು ಕ್ರಮವಹಿಸಲಾಗಿದ್ದು, ಸಮಸ್ಯೆ ನಿವಾರಣೆಗಾಗಿ ಜಿಲ್ಲೆಯ ಗ್ರಾಮ ಪಂಚಾಯತಗಳಲ್ಲಿ ಕ್ಯಾಂಪಗಳನ್ನು ಆಯೋಜಿಸಲಾಗಿದೆ.
ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳ ನೇತೃತ್ವದಲ್ಲಿ ಕ್ಯಾಂಪ್ ಗಳನ್ನು ಆಯೋಜನೆ ಮಾಡಲಾಗಿದ್ದು, ಎಲ್ಲ ತಾಂತ್ರಿಕ ಮತ್ತು ಬ್ಯಾಂಕ್ ಸಮಸ್ಯೆಗಳನ್ನು ಕ್ಯಾಂಪನಲ್ಲಿ ಪರಿಹರಿಸಬೇಕು.ಸ್ಥಳೀಯ ಬಾಪೂಜಿ ಸೇವಾ ಕೇಂದ್ರದ ಗಣಕ ಯಂತ್ರ ನಿರ್ವಾಹಕರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ ಸರ್ವಿಸಸ್ (ಇಡಿಸಿಎಸ್) ತಂಡಗಳು ಈ ಕ್ಯಾಂಪಗಳಲ್ಲಿ ಭಾಗವಹಿಸಬೇಕು ಇಂಡಿಯಾ ಫೆÇೀಸ್ಟ್ ಪೇಮೆಂಟ್ ಬ್ಯಾಂಕಿನ ಪ್ರತಿನಿಧಿಗಳು ಮತ್ತು ಇತರೆ ಬ್ಯಾಂಕ್ ಗಳ ಪ್ರತಿನಿಧಿಗಳು ಈ ಕ್ಯಾಂಪ್‍ಗಳಲ್ಲಿ ಭಾಗವಹಿಸಬೇಕು ಎಂದು ಅವರು ಸೂಚಿಸಿದ್ದಾರೆ.
ಪ್ರತಿ ಗ್ರಾಮ ಪಂಚಾಯತ್ ಕಛೇರಿಗಳಲ್ಲಿ ಡಿ.27 ರಿಂದ 29 ರವರೆಗೆ ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಕ್ಯಾಂಪ್‍ಗಳು ಜರುಗಲಿದ್ದು, ಕ್ಯಾಂಪ್ ಆಯೋಜಿಸುವ ಕುರಿತು ಇಡಿಸಿಎಸ್ ಅವರು ಎಸ್.ಎಂ.ಎಸ್ ಮೂಲಕ ಫಲಾನಿಭವಿಗಳಿಗೆ ಮಾಹಿತಿ ನೀಡಲಿದ್ದಾರೆ.
ಕ್ಯಾಂಪ್ ಗಳಲ್ಲಿ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗೆ ಆಧಾರ ಜೋಡಣೆ, ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯುವುದು ಮತ್ತು ಆಧಾರ ಜೋಡಣೆ ಮಾಡುವುದು.ಇ-ಕೆವೈಸಿ ಅಪ್ಡೇಟ್ ಮಾಡುವುದು, ಗೃಹಲಕ್ಷ್ಮಿ ಅರ್ಜಿಯ ಸ್ಥಿತಿ ಪರಿಶೀಲಿಸುವುದು, ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಇತರೆ ಸಮಸ್ಯೆಗಳನ್ನು ಪರಿಹರಿಸುವಂತೆ ಅವರು ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೂ 520906 ರ ಪೈಕಿ 461159 ಮಹಿಳಾ ಕುಟುಂಬಗಳು ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದು, ಪ್ರತಿ ತಿಂಗಳು ಅವರುಗಳ ಬ್ಯಾಂಕ್ ಖಾತೆಗೆ ರೂ.2000 ಗಳನ್ನು ನೇರ ನಗದು ವರ್ಗಾವಣೆ ಮೂಲಕ ಪಾವತಿ ಮಾಡಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿ ಪ್ರಕ್ರಿಯೆಯಲ್ಲಿ ಹಲವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡದೇ ಇರುವುದು ಹಾಗೂ ನಿಷ್ಕ್ರೀಯ ಖಾತೆಗೆಳಿಗೆ ಆಧಾರ್ ಜೋಡಣೆ ಮಾಡಿರುವುದು ಕಂಡುಬಂದಿದೆ. ಈ ಫಲಾನುಭವಿಗಳು ಹೊಸ ಬ್ಯಾಂಕ್ ಖಾತೆ ತೆರೆಯಲು ಇಚ್ಛಿಸಿರುವುದು, ಹಾಗೆಯೇ ಬಹಳಷ್ಟು ಫಲಾನುಭವಿಗಳು ನೇರ ನಗದು ವರ್ಗಾವಣೆ ಪ್ರಕ್ರಿಯೆಯನ್ನು ಸುಗಮಗೊಳಿಸಲು ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡುವುದು ಅಗತ್ಯವಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.