ಗೃಹಲಕ್ಷ್ಮಿ ಯೋಜನೆಗೆ ೨೮,೬೦೦ ಕೋಟಿ ರೂ. ಅನುದಾನ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಫೆ.೧೬:ಪ್ರಸಕ್ತ ಸಾಲಿನ ಮುಂಗಡಪತ್ರದಲ್ಲಿ ಗೃಹಲಕ್ಷ್ಮಿ ಯೋಜನೆಗಾಗಿ ೨೮,೬೦೮ ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ತಿಳಿಸಿದರು.ಗೃಹಲಕ್ಷ್ಮಿ ಯೋಜನೆ ಜಾರಿಯಿಂದ ಮಹಿಳೆಯರ ಆದಾಯ ಹೆಚ್ಚಳದ ಜತೆಗೆ ಕುಟುಂಬ ನಿರ್ವಹಣೆಯಲ್ಲಿ ತೊಡಗಿಸಿಕೊಳ್ಳಲು ಈ ಯೋಜನೆ ಅವಕಾಶವಾಗಲಿದೆ.ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ೨ ಸಾವಿರ ನೀಡಲಾಗುತ್ತಿದ್ದು, ೧.೩೩ಕೋಟಿ ಎಪಿಎಲ್-ಬಿಪಿಎಲ್,ಎಎವೈ ಪಡಿತರ ಚೀಟಿ ಹೊಂದಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ಈಗಾಗಲೇ ೧.೧೭ ಕೋಟಿ ರೂ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದು, ೧೧,೭೨೬ ಕೋಟಿ ರೂ.ಗಳನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ ಎಂದರು.ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ತರಬೇತಿ ಕಾರ್ಯಾಗಾರ ಆಯೋಜನೆಗೆ ೧೦ ಕೋಟಿ ರೂ.ಗಳನ್ನು ಒದಗಿಸಲಾಗಿದ್ದು,ಇದರಿಂದ ಮಕ್ಕಳ ಪ್ರಾರಂಭಿಕ ಶಿಕ್ಷಣ ಮತ್ತು ಆರೈಕೆಯಲ್ಲಿ ಸಾಮರ್ಥ್ಯ ಅಭಿವೃದ್ಧಿಗೆ ಅನುಕೂಲವಾಗಲಿದೆ.ಅಂಗನವಾಡಿ ಚಟುವಟಿಕೆಗಳ ಸುಗಮಕ್ಕಾಗಿ ೯೦ ಕೋಟಿ ರೂ.ವೆಚ್ಚದಲ್ಲಿ ೭೫.೯೩೮ ಸ್ಮಾರ್ಟ್ ಫೋನ್‌ಗಳನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಮೇಲ್ವಿಚಾರಕಿಯರಿಗೆ ಪೂರೈಸಲು ಒದಗಿಸಲಾಗುತ್ತದೆ.ರಾಜ್ಯದಲ್ಲಿ ಬಾಡಿಗೆ ಕಟ್ಟಡಗಳಲ್ಲಿರುವ ೧ ಸಾವಿರ ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಾಣಕ್ಕೆ ಆಧ್ಯತೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೦ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ.ಅದೇ ರೀತಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಸವಲತ್ತುಗಳನ್ನು ನೀಡಲಾಗುತ್ತಿದೆ.
ಗಂಭೀರ ಕಾಯಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ತಿಂಗಳು ೧ ಸಾವಿರ ರೂ. ಪ್ರೋತ್ಸಾಹ ಧನ ಆರೋಗ್ಯ ಇಲಾಖೆಯ ಸಮನ್ವಯದೊಂದಿಗೆ ಎಲ್ಲ ತಾಲ್ಲೂಕುಗಳಲ್ಲಿ ಹಿರಿಯ ನಾಗರಿಕರಿಗೆ ಪ್ರತಿವರ್ಷ ೨ ಕಣ್ಣಿನ ಪೊರೆ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಲು ಮುಖ್ಯಮಂತ್ರಿಗಳು ತೀರ್ಮಾನಿಸಿದ್ದಾರೆ.
ನಿರಾಶ್ರಿತ ಬೌದ್ಧಿಕ ವಿಕಲಚೇತನರ ಆರೈಕೆ ಮತ್ತು ಸಂರಕ್ಷಣೆಗಾಗಿ ೪ ಅನುಪಾಲನಾ ಗೃಹಗಳನ್ನು ೨ ಕೋಟಿ ರೂ ವೆಚ್ಚದಲ್ಲಿ ಪ್ರಾರಂಭಿಸಲಾಗುತ್ತಿದೆ.
ಲಿಂಗತ್ವ ಅಲ್ಪಸಂಖ್ಯಾತರ ಬದುಕನ್ನು ಇನ್ನಷ್ಟು ಹಸನಾಗಿಸಲು ಮೈತ್ರಿ ಯೋಜನೆಯಡಿ ನೀಡುವ ಮಾಸಾಶನ ೮೦೦ ರೂ.ಗಳಿಂದ ೧,೫೦೦ ರೂ.ಗಳಿಗೆ ಹೆಚ್ಚಿಸಲಾಗುತ್ತದೆ. ಇದರ ಜತೆಗೆ ಗುರುತಿಸುವಿಕೆ ಮತ್ತು ಗುರುತಿನ ಚೀಟಿ ಪ್ರಕ್ರಿಯೆ ಸರಳೀಕರಣ ಮಾಡಲಾಗುತ್ತಿದೆ.

  • ಮಾಸಾಶನ ೧,೫೦೦ ರೂ.ಗಳಿಂದ ೨ ಸಾವಿರ ರೂ.ಗಳಿಗೆ ಹೆಚ್ಚಳ
  • ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ವಿಶೇಷ ಪ್ಯಾಕೇಜ್.
  • ವಸತಿರಹಿತರಿಗೆ ರಾಜೀವ್‌ಗಾಂಧಿ ವಸತಿ ನಿಗಮದಿಂದ ವಸತಿ ಭಾಗ್ಯ
  • ಪ್ರಸಕ್ತ ಸಾಲಿನಲ್ಲಿ ಮಹಿಳಾ ಉದ್ದೇಶಿತ ಯೋಜನೆಗಳಿಗೆ ೮೬,೪೨೦ ಕೋಟಿ ಅನುದಾನ
  • ಮಕ್ಕಳ ಯೋಜನೆಗಳಿಗೆ ಪ್ರಸಕ್ತ ಸಾಲಿನಲ್ಲಿ ೫೪,೬೧೭ ಕೋಟಿ ನಿಗದಿ