(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜು21: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಬುಧವಾರ ಚಾಲನೆ ದೊರಕುತ್ತಿದ್ದಂತೆ ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಲು ಗುರುವಾರ ದಿನ ತಾಲೂಕ ಪಂಚಾಯಿತಿ ಪುರಸಭೆ ಮತ್ತು ಟಿಎಪಿಸಿಎಂಎಸ್ ಕಾರ್ಯಾಲಯಗಳಲ್ಲಿ ಕೈಯಲ್ಲಿ ಆಧಾರ ಹಿಡಿದುಕೊಂಡು ಕಚೇರಿಗಳ ಮುಂದೆ ನಿಂತ ದೃಶ್ಯ ಎದ್ದು ಕಾಣುತ್ತಿತ್ತು..
ತಾಲೂಕ ಪಂಚಾಯತಿಯ ಕಾರ್ಯಾಲಯದಲ್ಲಿ ಹೊರಗಡೆ ರಾಜ್ಯ ಸರ್ಕಾರ ಘೋಷಿಸಿದ ಸಂಪರ್ಕದ ಮೊಬೈಲ್ ನಂಬರ್ ಅನ್ನು ಅಳವಡಿಸಲಾಗಿತ್ತು ಈ ಕುರಿತು ಮಾಹಿತಿ ನೀಡಲು ಸಿಬ್ಬಂದಿ ಯೋಜನೆ ಮಾಡಲಾಗಿತ್ತು.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಿರುವ ಮೊಬೈಲ್ ಸಂಖ್ಯೆಗೆ ಪಡಿತರ ಚೀಟಿಯ ಸಂಖ್ಯೆಯನ್ನು ಅಳವಡಿಸಿ ಮೆಸೇಜ್ ಮಾಡಿದಾಗ ಮರುಕ್ಷಣದಲ್ಲಿ ಮೊಬೈಲಿಗೆ ಯಾವ ದಿನಾಂಕ ವೇಳೆ ಮತ್ತು ಸ್ಥಳಗಳ ಕುರಿತು ಮಾಹಿತಿ ಬರಲಿದೆ. ಗುರುವಾರ ಅನೇಕ ಮಹಿಳೆಯರು ಗ್ರಾಮೀಣ ಪ್ರದೇಶಗಳಿಂದ ಬಂದು ಮಾಹಿತಿ ಪಡೆದುಕೊಂಡು ಹೋಗುತ್ತಿದ್ದ ದೃಶ್ಯ ಕಂಡುಬಂದಿತು.