ಬೆಂಗಳೂರು,ಜೂ.೧೫:ಮಹಿಳಾ ಸಬಲೀಕರಣಕ್ಕಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯ ಅರ್ಜಿ ಸಲ್ಲಿಕೆ ನಾಳೆ(ಜೂನ್ ೧೬)ಯಿಂದ ಆರಂಭವಾಗಲಿದ್ದು, ಆಗಸ್ಟ್ ೧೮ ರಂದು ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಆರ್. ಹೆಬ್ಬಾಳ್ಕರ್ ಹೇಳಿದರು.
ವಿಧಾನಸೌಧದಲಿ ಸುದ್ದಿಗೋಷ್ಠಿಯಲ್ಲ್ಲಿಂದು ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಯ ಮಾಹಿತಿ ನೀಡಿದ ಅವರು, ಪ್ರತಿ ಕುಟುಂಬದ ಯಜಮಾನಿಗೆ ಡಿಬಿಟಿ ಮೂಲಕ ಮಾಸಿಕ ೨ ಸಾವಿರ ರೂ. ನೀಡುವ ಗೃಹಲಕ್ಷ್ಮಿ ಯೋಜನೆಗೆ ನಾಳೆಯಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಯಾವುದೇ ಕೊನೆಯ ದಿನಾಂಕವಿರುವುದಿಲ್ಲ. ವರ್ಷಪೂರ್ತಿ ಅರ್ಜಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತದೆ ಎಂದವರು ಹೇಳಿದರು,ಗೃಹಲಕ್ಷ್ಮಿ ಯೋಜನೆಗೆ ಅರ್ಜಿಗಳನ್ನು ಆನ್‌ಲೈನ್, ಆಫ್‌ಲೈನ್‌ಗಳನ್ನು ಸಲ್ಲಿಸಬಹುದು, ಸೇವಾಸಿಂಧು ಪೋರ್ಟಲ್,ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳು ಅಥವಾ ಗ್ರಾಮ ಪಂಚಾಯ್ತಿಯ ಕೇಂದ್ರ, ಆಯಾ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗಳಲ್ಲೂ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ಹೇಳಿದರು.ರಾಜ್ಯದಲ್ಲಿ ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ಯಜಮಾನಿ ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಬಹುದು, ಒಂದು ಕುಟುಂಬಕ್ಕೆ ಒಬ್ಬರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದರು.ಗೃಹಲಕ್ಷ್ಮಿ ಯೋಜನೆಯನ್ನು ಆಗಸ್ಟ್ ೧೮ ರಂದು ಬೆಳಗಾವಿ ಇಲ್ಲವೆ ಹುಬ್ಬಳ್ಳಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಉದ್ಘಾಟಿಸಲಿದ್ದಾರೆ ಎಂದು ಅವರು ಹೇಳಿದರು.ಗೃಹಲಕ್ಷ್ಮಿ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ ವಾಸವಿರುವವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ ಯೋಜನೆಯಲ್ಲಿ ಆಧಾರ್‌ಕಾರ್ಡ್, ವಾಸಸ್ಥಳದ ದೃಢೀಕರಣದ ಪತ್ರ, ೨ ಪಾಸ್‌ಪೋರ್ಟ್ ಭಾವಚಿತ್ರ, ಆಧಾರ್‌ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್‌ಸಂಖ್ಯೆಗಳನ್ನು ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ನೀಡಬೇಕು.
ಅರ್ಜಿ ಸಲ್ಲಿಸುವವರು ತಮ್ಮ ಗುರುತಿನ ಚೀಟಿ ಜತೆಗೆ ಬ್ಯಾಂಕ್‌ಖಾತೆಗಳ ವಿವರಗಳನ್ನು ಸಲ್ಲಿಸಬೇಕು. ಮಹಿಳೆಯ ಆಧಾರ್‌ಕಾರ್ಡ್ ಜತೆಗೆ ಪತಿಯ ಆಧಾರ್‌ಕಾರ್ಡ್‌ನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಬಗ್ಗೆ ಯಾವುದೇ ಅನುಮಾನಗಳಿದ್ದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯವಾಣಿ ೧೯೦೨ನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು.
ಅರ್ಜಿಗಳ ಪರಿಶೀಲನೆ ಪೂರ್ಣಗೊಂಡ ನಂತರ ೨ ಸಾವಿರ ರೂ. ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ತೆರಿಗೆ ಪಾವತಿದಾರರಿಗೆ ಯೋಜನೆಯ ಲಾಭ ಇಲ್ಲ
ತೆರಿಗೆ ಪಾವತಿಸುವವರಿಗೆ ಈ ಲಾಭ ಸಿಗಲ್ಲ, ಪತಿ ತೆರಿಗೆ ಕಟ್ಟುತ್ತಿದ್ದರೆ ಪತ್ನಿಗೆ ಈ ಯೋಜನೆಯ ಫಲಾನುಭವಿ ಆಗಲ್ಲ ಎಂದವರು ಸ್ಪಷ್ಟಪಡಿಸಿ, ತಪ್ಪು ಮಾಹಿತಿ ನೀಡುವವರನ್ನು ಪತ್ತೆ ಹಚ್ಚಲು ಇ-ಗೌರ್‍ನೆಸ್ ಅಡಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಮಾಡಿರುವುದರಿಂದ ತೆರಿಗೆ ಪಾವತಿದಾರರ ಪತ್ನಿಯರ ಅರ್ಜಿ ತಿರಸ್ಕೃತ ಆಗಲಿದೆ ಎಂದರು.
ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕವಿರುವುದಿಲ್ಲ. ಉಚಿತವಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಯೋಜನೆಗೆ ವಾರ್ಷಿಕ ೩೦ ಸಾವಿರ ಕೋಟಿ ರೂ. ವೆಚ್ಚವಾಗುತ್ತದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯುಕ್ತೆ ಮಂಜುಳಾ ಇದ್ದರು.