ಗೃಹಲಕ್ಷ್ಮಿಯೋಜನೆ ಸದುಪಯೋಗಕ್ಕೆ ಜಿಲ್ಲಾಧಿಕಾರಿ ಕರೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.21:- ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಗೃಹಲಕ್ಷ್ಮಿ ಯೋಜನೆಯನ್ನು ಜಿಲ್ಲೆಯಲ್ಲಿರುವ ಎಲ್ಲಾ ಅರ್ಹ ಫಲಾನುಭವಿಗಳು ಸದುಪಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಸಿ.ಟಿ ಅವರು ತಿಳಿಸಿದರು.
ನಗರದ ಡಿ. ದೇವರಾಜ ಅರಸು ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಗೆ ಪ್ರತಿ ತಿಂಗಳಿಗೆ 2 ಸಾವಿರ ರೂ. ನೀಡುವ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಜಿಲ್ಲೆಯಲ್ಲಿ 270 ಸೇವಾ ಕೇಂದ್ರಗಳು ಲಭ್ಯವಿದೆ. ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ತೆರೆದಿರುವ ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ. ಅರ್ಹ ಫಲಾನುಭವಿಗಳು ಯೋಜನೆಯ ಪ್ರಯೋಜನೆ ಪಡೆಯಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಸೂಚಿತ ಸೇವಾ ಕೇಂದ್ರಗಳಲ್ಲಿ ಸುಸೂತ್ರವಾಗಿ ನೋಂದಣಿ ಮಾಡಿಕೊಂಡು ಸ್ಥಳದಲ್ಲಿಯೇ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ನೀಡಲಾಗುತ್ತದೆ. ಈ ಫಲಾನುಭವಿಗಳಿಗೆ ಮುಂದಿನ ತಿಂಗಳಿನಿಂದ ಅವರ ಖಾತೆಗೆ ಹಣ ಜಮೆಯಾಗಲಿದೆ. ಜಿಲ್ಲಾಡಳಿತ, ಗ್ರಾಮೀಣ ಅಭಿವೃದ್ದಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಸಹಕಾರದೊಂದಿಗೆ ಯೋಜನೆ ತಲುಪಿಸಲು ಸಮರ್ಪಕವಾಗಿ ವ್ಯವಸ್ಥೆ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಅಂದಾಜು 2.09 ಲಕ್ಷ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆ ಪ್ರಯೋಜನವಾಗಲಿದೆ. ಪೂರ್ವ ಅನುಮೋದನೆಗೊಂಡಿರುವ ಪಡಿತರ ಚೀಟಿಯ ಕುಟುಂಬದ ಯಜಮಾನಿ ಮಹಿಳೆ ಫಲಾನುಭವಿಯು ನೋಂದಾಯಿಸಲು ಮೊಬೈಲ್ ಸಂದೇಶ ಬರಲಿದೆ. ಸಂದೇಶದಲ್ಲಿ ನೋಂದಣಿಗೆ ನಿಗದಿ ಮಾಡಿರುವ ದಿನಾಂಕ, ಸಮಯ, ನೋಂದಣಿ ಕೇಂದ್ರ ವಿವರ ಇರಲಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ನೋಂದಣಿಗೆ ಯಾವುದೇ ಶುಲ್ಕ ನೀಡುವಂತಿಲ್ಲ. ಜಿಲ್ಲೆಯ ಯಾವುದೇ ಭಾಗದಲ್ಲಿ ಹಣ ಕೇಳುವುದು ಕಂಡುಬಂದಲ್ಲಿ ದೂರು ನೀಡಬೇಕು. ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ನೆರವಾಗಲು ಹಾಗೂ ಮಾಹಿತಿ ನೀಡಲು ಸಹಾಯವಾಣಿಯನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ತೆರೆಯಲಾಗಿದೆ ಎಂದರು.
ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣ 61.5ರಷ್ಟಿದ್ದು ಇದರ ಸುಧಾರಣೆಗೂ ಹೆಚ್ಚಿನ ಗಮನ ನೀಡಲಾಗುತ್ತದೆ. ಅಪೌಷ್ಠಿಕತೆ ನಿವಾರಣೆ, ಆರೋಗ್ಯ ಕ್ಷೇತ್ರದ ಬಲವರ್ಧನೆ, ಶಿಕ್ಷಣಕ್ಕೆ ಒತ್ತು ನೀಡುವುದೂ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ದಿ ಕೆಲಸಗಳಿಗೆ ಶ್ರಮಿಸೋಣ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರ ಇರಲಿದೆ ಎಂಬ ವಿಶ್ವಾಸ ಹೊಂದಿರುವುದಾಗಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಗೀತಾಲಕ್ಷ್ಮಿ ಅವರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಲು ಎಸ್.ಎಂ.ಎಸ್ ಸ್ವೀಕರಿಸಿದ ಫಲಾನುಭವಿಗಳು ಪಡಿತರ ಚೀಟಿ ಸಂಖ್ಯೆ, ಫಲಾನುಭವಿ ಹಾಗೂ ಅವರ ಪತಿಯ ಆಧಾರ್ ಕಾರ್ಡ್ ಸಂಖ್ಯೆ, ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಪುಸ್ತಕ ಅಥವಾ ಪರ್ಯಾಯ ಬ್ಯಾಂಕ್ ಖಾತೆಯ ವಿವರ, ಒಟಿಪಿಗಾಗಿ ಮೊಬೈಲ್ ತರಬೇಕು ಎಂದರು.
ನೋಂದಣಿ ಕೇಂದ್ರಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಯಾವುದೇ ಮಾಹಿತಿ ಸ್ಪಷ್ಟನೆಗಳಿಗೆ ತಾಲೂಕು ಶಿಶು ಅಭಿವೃದ್ದಿ ಯೋಜನಾ ಅಧಿಕಾರಿಗಳನ್ನು ಸಂಪಕಿಸಬೇಕು. ನೇರವಾಗಿ ನನ್ನನ್ನೂ ಸಹ ಸಂಪರ್ಕಿಸಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ನಿಡಲಾಗುವುದು. ಮಹಿಳೆಯರ ಆರ್ಥಿಕ, ಸಾಮಾಜಿಕ ಸಶಕ್ತಿಕರಣಕ್ಕಾಗಿ ಅನುಷ್ಠಾನವಾಗುತ್ತಿರುವ ಗೃಹಲಕ್ಷ್ಮಿ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಗೀತಾಲಕ್ಷ್ಮಿ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಯೋಜನೆಗೆ ನೋಂದಣಿಯಾದ ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು.
ನಗರಸಭಾ ಸದಸ್ಯರಾದ ನೀಲಮ್ಮ, ಖಲೀಲ್ ಉಲ್ಲಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಸುಧಾ, ನಗರಸಭೆ ಪೌರಾಯುಕ್ತರಾದ ಎಸ್.ವಿ. ರಾಮದಾಸ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ನಗರದ ಜಿಲ್ಲಾಡಳಿತ ಭವನದಲ್ಲಿ ತೆರೆಯಲಾಗಿರುವ ಸಹಾಯವಾಣಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸಿ.ಟಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸರಸ್ವತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಗೀತಾಲಕ್ಷ್ಮಿ ಇತರರು ಹಾಜರಿದ್ದರು.