ಗೃಹಲಕ್ಷ್ಮಿಗಾಗಿ ಮಹಿಳೆಯರ ಅಲೆದಾಟ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಡಿ.31: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ಜಾರಿಯಾಗಿ ನಾಲ್ಕು ತಿಂಗಳು ಕಳೆದರೂ ತಾಲ್ಲೂಕಿನಲ್ಲಿ ಇಂದಿಗೂ ಸಾವಿರಾರು ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗದೆ ನಿತ್ಯವೂ ತಾಲ್ಲೂಕಿನ ನೂರಾರು ಮಹಿಳೆಯರು ನಗರದ ಸಿಡಿಪಿಒ ಕಚೇರಿ, ಸೇವಾ ಸಿಂಧು ಡಿಜಿಟಲ್ ಕೇಂದ್ರಗಳಿಗೆ ಅಲೆದಾಡುವಂತಾಗಿದೆ. 
ತಾಲೂಕಿನ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ  ಪ್ರಕಾರ ತಾಲ್ಲೂಕಿನಲ್ಲಿ 58,540 ಬಿ ಪಿ ಎಲ್ ಫಲಾನುಭವಿಗಳು,  6,078 ಅಂತ್ಯೋದಯ ಹಾಗೂ 4,555 ಎ ಪಿ ಎಲ್ ಒಟ್ಟು 69,173 ಫಲಾನುಭವಿಗಳಿದ್ದಾರೆ. ಆದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 57,660 ಫಲಾನುಭವಿಗಳ ವಿವರವನ್ನು ಸರ್ಕಾರದಿಂದ ನೇರ ಹಣ ವರ್ಗಾವಣೆಗಾಗಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇದರಲ್ಲಿ 2,269 ಫಲಾನುಭವಿಗಳ ಸೂಕ್ತ ದಾಖಲೆಗಳ ಕೊರತೆಯಿಂದ ತಿರಸ್ಕೃತವಾಗಿದ್ದರೆ, 231 ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಸಮಸ್ಯೆಯಿಂದ ನೇರ ಹಣ ವರ್ಗಾವಣೆ ಸಾಧ್ಯವಾಗಿಲ್ಲ. ಒಟ್ಟಿನಲ್ಲಿ 51,516 ಫಲಾನುಭವಿಗಳಿಗೆ ಮಾತ್ರ ಗೃಹಲಕ್ಷ್ಮಿ ಹಣ ಸಂದಾಯವಾಗಿದ್ದು, ಉಳಿದ 17,657 ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾಗಿದ್ದಾರೆ.
ಸರ್ಕಾರ ಯೋಜನೆ ಜಾರಿ ಸಂದರ್ಭದಲ್ಲಿ ಕುಟುಂಬದ ಮಹಿಳೆಯು ಮನೆಯೊಡತಿಯಾಗಿರಬೇಕು ಎಂದು ಪಡಿತರ ಕಾರ್ಡ್ ತಿದ್ದುಪಡಿಗೆ ಆವಕಾಶ ಕಲ್ಪಿಸಿತ್ತು. ಬಹುತೇಕ ಪಡಿತರ ಚೀಟಿದಾರರು ಕುಟುಂಬದ ಮಹಿಳೆಯನ್ನು ಯಜಮಾನಿಯಾಗಿ ತಿದ್ದುಪಡಿ ಮಾಡಿ ಹೊಸ ಪಡಿತರ ಚೀಟಿಯನ್ನೂ ಪಡೆದಿದ್ದರು. ಇವರಿಗೆ ಅರ್ಜಿ ಸಲ್ಲಿಸಲು ಅವಕಾಶ ಸಿಗಲಿಲ್ಲ ಇದರಿಂದಾಗಿ ಈ ರೀತಿ ತಿದ್ದುಪಡಿಗೊಂಡ ಫಲಾನುಭವಿಗಳಿಗೆ ಇನ್ನೂ ಹಣ ವರ್ಗಾವಣೆಗೊಂಡಿಲ್ಲ.
ಮತ್ತೊಂದೆಡೆ ಆಧಾರ್ ಜೋಡಣೆ, ಬ್ಯಾಂಕಿಗೆ ಸಂಬಂಧಿಸಿದ ತೊಂದರೆಗಳು, ಹೊಸ ಬ್ಯಾಂಕ್ ಖಾತೆ ಆರಂಭ ಮತ್ತಿತರೆ ಸಮಸ್ಯೆಗಳಿಂದ ಹಲವು ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಪ್ರಯೋಜನ ಪಡೆಯಲು ಸಾಧ್ಯವಾಗದೆ ಇರುವುದು ಸಾಮಾನ್ಯವಾಗಿದೆ. ಈಗ ಬಹುತೇಕ ಗೃಹಲಕ್ಷ್ಮಿ ಯೋಜನೆ ವಂಚಿತ ಫಲಾನುಭವಿಗಳು ನಿತ್ಯವೂ ಸಿಡಿಪಿಓ ಕಚೇರಿಗೆ ಅಲೆದಾಡುತ್ತಿದ್ದು ಸಮಸ್ಯೆಗೆ ಪರಿಹಾರ ಇಲ್ಲದೆ ಸಪ್ಪೆ ಮೋರೆ ಹಾಕಿಕೊಂಡು ವಾಪಾಸ್ಸು ಹೋಗುವಂತಾಗಿದೆ.
 ನಾವು ಅರ್ಜಿ ಸಲ್ಲಿಸಿ ನಾಲ್ಕು ತಿಂಗಳಾಗಿದ್ದರೂ ಇಲ್ಲಿಯವರೆಗೆ ಗೃಹಲಕ್ಷ್ಮಿ ಹಣ ನಮ್ಮ ಖಾತೆಗೆ ಬಿದ್ದಿಲ್ಲ, ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಸಮರ್ಪಕವಾದ ಉತ್ತರ ದೊರೆಯುತ್ತಿಲ್ಲ ಎಂದು ತೆಕ್ಕಲಕೋಟೆ ಮಹಿಳೆಯರಾದ ಯಂಕಮ್ಮ, ಮಲ್ಲಮ್ಮ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
 ಫಲಾನುಭವಿಗಳ ಗೃಹಲಕ್ಷ್ಮಿ ಹಣ ನೇರ ವರ್ಗಾವಣೆ ಸಮಸ್ಯೆ ಇರುವುದು ಇಲಾಖೆಯ ಗಮನಕ್ಕೆ ಬಂದಿದೆ. ಸಮಸ್ಯೆ ಇರುವ ಫಲಾನುಭವಿಗಳ ವಿವರ ಗೂಗಲ್ ಶೀಟ್‌ನಲ್ಲಿ ಸೇವಾ ಸಿಂಧು ಪೋರ್ಟಲ್‌ಗೆ ಅಪ್ ಲೋಡ್ ಮಾಡಲಾಗಿದ್ದು, ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶವಿದ್ದು ಈ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ಸಿ.ಡಿ.ಪಿ.ಒ. ಪ್ರದೀಪ್ ತಿಳಿಸಿದ್ದಾರೆ.