ಗೃಹರಕ್ಷಕರ ಪುನರ್ ಮನನ ತರಬೇತಿ ಶಿಬಿರದ ಸಮಾರೋಪ


ಬಳ್ಳಾರಿ,ಜು.17: ಬಳ್ಳಾರಿ ತಾಲೂಕಿನ ಮೀನಹಳ್ಳಿ(ಹಗರಿ)ಯ ಗೃಹರಕ್ಷಕರ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ 12 ದಿನಗಳ ಕಾಲ ‘ಪುನರ್ ಮನನ’ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಶುಕ್ರವಾರದಂದು ತರಬೇತಿ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ರಾಜ್ಯದ 15 ವಿವಿಧ ಜಿಲ್ಲೆಗಳಿಂದ ಒಟ್ಟು 59ಜನ ಗೃಹರಕ್ಷಕರು ತರಬೇತಿಯಲ್ಲಿ ಹಾಜರಿದ್ದರು.
ಬೆಂಗಳೂರಿನ ಗೃಹರಕ್ಷಕ ಮತ್ತು ಪೌರರಕ್ಷಣಾ ತರಬೇತಿ ಅಕಾಡೆಮಿಯವರು ಪ್ರತಿ ದಿನ ಗೃಹರಕ್ಷಕರಿಗೆ ದೈಹಿಕ ವ್ಯಾಯಾಮ, ಪೂಟ್‍ಡ್ರಿಲ್, ಪ್ರಾಯೋಗಿಕ ಮತ್ತು ಉಪನ್ಯಾಸ ತರಗತಿಗಳನ್ನು ನಡೆಸಲಾಯಿತು. ಜು.14ರಂದು ಗೃಹರಕ್ಷಕರಿಗೆ ಪರೀಕ್ಷೆ ನಡೆಸಲಾಯಿತು.
ಕೋಲಾರ ಜಿಲ್ಲೆಯ ನವೀನ್ ಕುಮಾರ್ ಪ್ರಥಮ ಸ್ಥಾನ ಹಾಗೂ ಯಾದಗಿರಿ ಜಿಲ್ಲೆಯ ಸುರೇಶ್ ದ್ವಿತೀಯ ಸ್ಥಾನ ಪಡೆದುಕೊಂಡರು. 
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗೃಹರಕ್ಷಕದಳದ ಸಮಾದೇಷ್ಟರು(ಪ್ರ) ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಗುರುನಾಥ್ ಮತ್ತೂರು ಅವರು ಮಾತನಾಡಿ, ಪ್ರತಿಯೊಬ್ಬ ಗೃಹರಕ್ಷಕರು ಶಿಸ್ತು ಕಾಪಾಡುವಂತೆ ಕರೆ ನೀಡುವ ಮೂಲಕ ತರಬೇತಿ ಪಡೆದ ಎಲ್ಲಾ ಗೃಹರಕ್ಷಕರು ತಮ್ಮ ಜಿಲ್ಲೆಗೆ ತೆರಳಿ ಇಲ್ಲಿ ಕಲಿತಿರುವ ವಿಷಯಗಳನ್ನು ಇತರೆ ಗೃಹರಕ್ಷಕರಿಗೆ ಕಲಿಸಬೇಕು ಎಂದು ಸೂಚಿಸಿದರು. ತರಬೇತಿ ಶಿಬಿರವನ್ನು ನಡೆಸಲು ಹಗಲು-ಇರಳು ಶ್ರಮಿಸಿದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಅಭಿನಂದಿಸಿದರು.
ತರಬೇತಿ ಶಿಬಿರದಲ್ಲಿ ಹಾಜರಿದ್ದ ಗೃಹರಕ್ಷಕರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಉಪ ಸಮಾದೇಷ್ಟರಾದ ಬಿ.ಎಸ್.ಕಾಂಬಳೆ, ಬೆಂಗಳೂರಿನ ಗೃಹರಕ್ಷಕ ಮತ್ತು ಪೌರಕ್ಷಣಾ ಅಕಾಡೆಮಿಯ ಬೋಧಕರಾದ ನಾಗರಾಜ.ಬಿ.ಕೆ, ಬೆಂಗಳೂರಿನ ಗೃಹರಕ್ಷಕ ಮತ್ತು ಪೌರಕ್ಷಣಾ ಅಕಾಡೆಮಿಯ ಸೈನಿಕರಾದ ರವಿಂದ್ರ ಮಾದೇವ ಪೂಜಾರಿ, ಕೊಪ್ಪಳ ಜಿಲ್ಲೆಯ ಬೋಧಕರಾದ ಯೋಗೀಂದ್ರ, ನವೀನ್, ಪಿ.ಡಿ.ಹಳ್ಳಿ ಪೊಲೀಸ್ ಠಾಣೆಯ ಸಿ.ಪಿ.ಐ ಉಮೇಶ್, ನಿವೃತ್ತ ಸೆಕೆಂಡ್-ಇನ್-ಕಮಾಂಡ್ ಲಕ್ಷ್ಮೀನರಸಿಂಹ, ಪ್ರ.ದ.ಸ. ಬಿ.ಎನ್.ಗೋಪಿನಾಥ್, ಗೃಹರಕ್ಷಕ ಗೌರವ ಅಧಿಕಾರಿಗಳಾದ ಜಿ.ಬಸವರಾಜು, ಜೆ.ಸುರೇಶ್, ಬಿ.ಕೆ.ಬಸವಲಿಂಗ ಸೇರಿದಂತೆ 15 ಜಿಲ್ಲೆಗಳ ಗೃಹರಕ್ಷಕರು ಉಪಸ್ಥಿತರಿದ್ದರು.

Attachments area