ಗೃಹಜ್ಯೋತಿ ಯೋಜನೆ: ನಾಳೆಯಿಂದ ನೋಂದಣಿ

ಬೆಂಗಳೂರು,ಜೂ.೧೭:ಜುಲೈ ೧ ರಿಂದ ಜಾರಿಯಾಗಲಿರುವ ಗೃಹಜ್ಯೋತಿ ಯೋಜನೆಗೆ ನಾಳೆಯಿಂದ ನೋಂದಣಿ ಆರಂಭವಾಗಲಿದೆ. ಮಾಸಿಕ ೨೦೦ ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಈ ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯಲು ಆಧಾರ್‌ಸಂಖ್ಯೆಯನ್ನು ಸೇವಾಸಿಂಧು ಪೋರ್ಟಲ್‌ನಲ್ಲಿ ಜೋಡಣೆ ಮಾಡಿದರೆ ಸಾಕು ಎಂದು ಇಂಧನ ಇಲಾಖೆ ಹೇಳಿದೆ.
ಗೃಹಜ್ಯೋತಿ ಯೋಜನೆಯ ಲಾಭ ಪಡೆಯುವ ಬಗ್ಗೆ ಉಂಟಾಗಿರುವ ಗೊಂದಲಗಳಿಗೆ ಸ್ಪಷ್ಟನೆ ನೀಡಿರುವ ಇಂಧನ ಇಲಾಖೆ ಮನೆ ಮಾಲೀಕರಾಗಲಿ, ಬಾಡಿಗೆದಾರರಾಗಲಿ ತಾವು ವಾಸಿಸುತ್ತಿರುವ ಮನೆಯ ವಿಳಾಸವಿರುವ ಆಧಾರ್‌ಕಾರ್ಡ್‌ನ್ನು ಸೇವಾಸಿಂಧು ಪೋರ್ಟಲ್‌ನಲ್ಲಿ ಜೋಡಣೆ ಮಾಡಿ ನೋಂದಾಯಿಸುವ ಮೂಲಕ ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ. ನಾಳೆಯಿಂದ ಸೇವಾಸಿಂಧು ಪೋರ್ಟಲ್‌ನಲ್ಲಿ ರೂಪಿಸಿರುವ ವಿಳಾಸದಲ್ಲಿ ಲಾಗಿನ್ ಆಗಿ ನೋಂದಾಯಿಸಬೇಕು.
ಕಾಂಗ್ರೆಸ್ ಸರ್ಕಾರ ಚುನಾವಣಾ ಹೊತ್ತಿನಲ್ಲಿ ನೀಡಿದ್ದ ಗ್ಯಾರಂಟಿಯಂತೆ ಗೃಹಜ್ಯೋತಿ ಯೋಜನೆಯಡಿ ರಾಜ್ಯದ ಎಲ್ಲ ಗೃಹ ವಿದ್ಯುತ್ ಬಳಕೆದಾರರಿಗೆ ಮಾಸಿಕ ೨೦೦ ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಿದ್ದು, ಜುಲೈ ೧ ರಿಂದ ಈ ಯೋಜನೆ ಜಾರಿಯಾಗಲಿದೆ.