(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜು.೧:ಗೃಹಜ್ಯೋತಿ ಯೋಜನೆ ಇಂದಿನಿಂದ ಜಾರಿಗೆ ಬಂದಿದ್ದು, ಜುಲೈ ತಿಂಗಳಿನಿಂದ ಗೃಹಜ್ಯೋತಿಯಡಿ ಎಲ್ಲ ಫಲಾನುಭವಿಗಳಿಗೆ ೨೦೦ ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದರು.
ಚಿಕ್ಕಮಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಅಂತಿಮ ಗಡುವು ಇಲ್ಲ, ಗೃಹಜ್ಯೋತಿ ಯೋಜನೆಗೆ ಅರ್ಜಿ ಹಾಕದಿದ್ದರೆ ಆಗಸ್ಟ್‌ನಲ್ಲಿ ತಿಂಗಳ ವಿದ್ಯುತ್ ಬಳಕೆ ಬಿಲ್ ಬರುತ್ತದೆ. ಹಾಗಾಗಿ. ಗೃಹಜ್ಯೋತಿ ಲಾಭ ಪಡೆಯಲು ಎಲ್ಲರೂ ಅರ್ಜಿ ಹಾಕಲೇಬೇಕು ಎಂದು ಹೇಳಿದರು.
ಜುಲೈನಲ್ಲಿ ೨೦೦ ಯುನಿಟ್‌ವರೆಗೆ ಉಪಯೋಗಿಸುವ ವಿದ್ಯುತ್‌ಗೆ ಶುಲ್ಕವಿರುವುದಿಲ್ಲ. ಜುಲೈ ಬಿಲ್ ಆಗಸ್ಟ್‌ನಲ್ಲಿ ಬರುತ್ತದೆ. ಆಗ ಫಲಾನುಭವಿಗಳಿಗೆ ಶೂನ್ಯ ಬಿಲ್ ಇರುತ್ತದೆ. ನಿಗದಿಪಡಿಸಿದ್ದಕ್ಕಿಂತ ಹೆಚ್ಚು ವಿದ್ಯುತ್ ಬಳಸಿದ್ದರೆ ಅದಕ್ಕೆ ಶುಲ್ಕ ತೆರಬೇಕಾಗುತ್ತದೆ ಎಂದರು.
ಗೃಹಜ್ಯೋತಿ ಯೋಜನೆಗೆ ಇದುವರೆಗೂ ೮೬.೫ ಲಕ್ಷ ಜನ ಅರ್ಜಿ ಸಲ್ಲಿಸಿದ್ದಾರೆ. ಆದಷ್ಟು ಬೇಗ ಎಲ್ಲರೂ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಅವರು ಹೇಳಿದರು.