ಗೃಹಜ್ಯೋತಿ ಯೋಜನೆಗೆ ನಾಳೆ ಚಾಲನೆ

ಕಲಬುರಗಿ,ಆ.೪- ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಒಂದಾಗಿರುವ ಗೃಹಜ್ಯೋತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ನಿವಾರ ನಗರದ ಎನ್.ವಿ.ಮೈದಾನದಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಐಟಿ-ಬಿಟಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಸಿದ್ದಪಡಿಸಿದ್ದ ಪ್ರಣಾಳಿಕೆಗೆ ಅನುಗುಣವಾಗಿ ಐದು ಪ್ರಮುಖ ಗ್ಯಾರಂಟಿಗಳನ್ನು ಘೋಷಿಸಲಾಗಿತ್ತು. ಈ ಪೈಕಿ ಒಂದೊಂದೇ ಗ್ಯಾರಂಟಿ ಜಾರಿಗೊಳಿಸಲಾಗುತ್ತಿದೆ.
ರಾಜ್ಯ ಸರಕಾರ ಜನಪರ ಆಡಳಿತ ನೀಡುತ್ತಿದೆ ಎಂಬ ಸಂದೇಶ ರವಾನಿಸುವ ನಿಟ್ಟನಲ್ಲಿ ನಾಳೆ ಕಲಬುರಗಿ ನಗರದಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಲಾಗುತ್ತಿದ್ದು, ಎನ್.ವಿ.ಮೈದಾನದಲ್ಲಿ ಬೆಳಗ್ಗೆ ೧೦ಕ್ಕೆ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಔಪಚಾರಿಕವಾಗಿ ೧೦ ಫಲಾನುಭವಿಗಳಿಗೆ ಮುಖ್ಯಮಂತ್ರಿಗಳು ‘ಶೂನ್ಯ ವಿದ್ಯುತ್ ಬಿಲ್ ರಸೀದಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಗೃಹಜ್ಯೋತಿ ಯೋಜನೆಯಡಿ ರಾಜ್ಯದಲ್ಲಿ ಒಟ್ಟು ೧,೪೧,೨೩,೨೪೦ ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, ಕಲಬುರಗಿ ಜಿಲ್ಲೆಯಲ್ಲಿ ೪,೬೯,೦೨೯ ಫಲಾನುಭವಿಗಳು ಯೋಜನೆಯ ಲಾಭ ಪಡೆಯಲು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ರಾಜ್ಯ ಸರಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದೆ. ಈ ಮಾತಿಗೆ ಬದ್ಧವಾಗಿ ಈಗಾಗಲೇ ಶಕ್ತಿ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಆಗಸ್ಟ್ ೧೮ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಅನ್ಯಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ ೧೦ ಕೆ.ಜಿ. ಅಕ್ಕಿ ನೀಡುವುದಾಗಿ ಘೋಷಿಸಿದ್ದರೂ, ಕೇಂದ್ರ ಸರಕಾರದ ಅಸಹಕಾರದಿಂದಾಗಿ ಐದು ಕೆ.ಜಿ. ಅಕ್ಕಿ ಮತ್ತು ಉಳಿದ ಐದು ಕೆ.ಜಿ. ಅಕ್ಕಿಗೆ ಸಮಾನವಾಗಿ ಅಕ್ಕಿಯ ಹಣವನ್ನು ಫಲಾನುಭವಿಗಳಿಗೆ ನೇರ ಲಾಭ ವರ್ಗಾವಣೆ (ಡಿಬಿಟಿ) ಅಡಿ ಅವರ ಬ್ಯಾಂಕ್ ಖಾತೆಗಳಿಗೆ ಹಾಕಲಾಗಿದೆ. ಈ ಪೈಕಿ ಈಗಾಗಲೇ ಶೇ.೭೦ರಷ್ಟು ಫಲಾನುಭವಿಗಳಿಗೆ ಹಣ ತಲುಪಿದ್ದು, ಉಳಿದವರಿಗೆ ಇಷ್ಟರಲ್ಲೇ ಹಣ ತಲುಪಲಿದೆ. ಯುವನಿಧಿ ಯೋಜನೆ ಪ್ರಸಕ್ತ ಶೈಕ್ಷಣಿಕ ವ? ಮುಗಿದ ನಂತರ ಜಾರಿಯಾಗಲಿದೆ ಎಂದು ನುಡಿದರು.
ಗ್ಯಾರಂಟಿ ಯೋಜನೆಗಳಿಂದ ಇತರೆ ಯೋಜನೆಗಳಿಗೆ ಅನುದಾನದ ಕೊರತೆ ಎದುರಾಗಲಿದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿ ಯೋಜನೆಗಳ ಜಾರಿಗೆ ಅಗತ್ಯ ಅನುದಾನವನ್ನು ಈಗಾಗಲೇ ತೆಗೆದಿರಿಸಲಾಗಿದೆ. ಯಾವುದೇ ಪ್ರಮುಖ ಯೋಜನೆಗಳಿಗೆ ಹಣಕಾಸಿನ ಕೊರತೆ ಕಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯಿಂದ ವಿದ್ಯುಚ್ಛಕ್ತಿ ಕಂಪನಿಗೆ ನೀಡಬೇಕಿರುವ ಸುಮಾರು ರೂ.೪೦೦೦ ಕೋಟಿ ಸಬ್ಸಿಡಿ ಬಿಲ್ ಹಂತಹಂತವಾಗಿ ಪಾವತಿಸುವುದಾಗಿ ಈಗಾಗಲೇ ಇಂಧನ ಸಚಿವರಿಗೆ ತಿಳಿಸಲಾಗಿದೆ. ಒಂದುವೇಳೆ, ಸಾಧ್ಯವಾದರೆ ಏಕಕಾಲದಲ್ಲಿ ಸೆಟಲ್ ಮಾಡಲು ಸಾಧ್ಯವಾದರೆ ಅದನ್ನೂ ಮಾಡಲು ಸಿದ್ಧ ಎಂದರು.
ಕಲಬುರಗಿ ನಗರದಲ್ಲಿ ಎಲ್ ಅಂಡ್ ಟಿ ಕಂಪನಿಯವರು ನೀರು ಸರಬರಾಜು ಕಾಮಗಾರಿಯ ಭಾಗವಾಗಿ ತೋಡಿದ್ದ ನೀರಿನ ಗುಂಡಿಯಲ್ಲಿ ಬಿದ್ದು ಇಬ್ಬರು ಬಾಲಕರು ಮೃತಪಟ್ಟ ದುರ್ಘಟನೆ ಕುರಿತು ಪ್ರಸ್ತಾಪಿಸಿ ವಿಷಾದ ವ್ಯಕ್ತಪಡಿಸಿದ ಸಚಿವರು, ಈಗಾಗಲೇ ಸಂತ್ರಸ್ತ ಕುಟುಂಬಗಳಿಗೆ ಸರಕಾರದಿಂದ ಸಾಂತ್ವನ ಹೇಳಲಾಗಿದೆ. ಮೇಲಾಗಿ, ಬಾಲಕರ ಕುಟುಂಬಗಳಿಗೆ ಎಲ್ ಅಂಟ್ ಟಿ ಕಂಪನಿಯಿಂದ ಅಗತ್ಯ ಪರಿಹಾರ ಸಹ ನೀಡುವಂತೆ ಕ್ರಮ ಕೈಗೊಳ್ಳಲಾಗಿದೆ. ಈ ದುರ್ಘಟನೆಗೆ ಸಂಬಂಧಿಸಿದಂತೆ ಎಲ್ ಅಂಡ್ ಟಿ ಹಾಗೂ ಕಲಬುರಗಿ ಮಹಾನಗರ ಪಾಲಿಕೆಯ ಜೊತೆಗೆ ತಾವು ಸಹ ಜವಾಬ್ದಾರರು ಎಂದು ಬೇಸರ ವ್ಯಕ್ತಪಡಿಸಿದರು.