ಬಾಡಿಗೆ ಕರಾರು ಪತ್ರ ಕಡ್ಡಾಯವಲ್ಲ

ಬೆಂಗಳೂರು, ಜೂ.೭-ಗೃಹಜ್ಯೋತಿ ಯೋಜನೆಯಡಿ ೨೦೦ ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯಲು ಬಾಡಿಗೆ ಮನೆಯವರು ಬಾಡಿಗೆ ಮನೆಯ ವಿಳಾಸದ ಆಧಾರ್‌ಕಾರ್ಡ್ ಇದ್ದರೆ ಬಾಡಿಗೆ ಕರಾರುಪತ್ರ ಸಲ್ಲಿಸುವುದು ಕಡ್ಡಾಯವಲ್ಲ ಆದರೆ, ಆಧಾರ್ ಕಾರ್ಡ್‌ನಲ್ಲಿ ಈಗಿರುವ ಬಾಡಿಗೆ ಮನೆಯ ವಿಳಾಸ ಇರದಿದ್ದರೆ ಕರಾರುಪತ್ರ ಸಲ್ಲಿಸುವುದು ಕಡ್ಡಾಯ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದ್ದಾರೆ.ಗೃಹಜ್ಯೋತಿ ಸೌಲಭ್ಯ ಪಡೆಯುವವರು ಮೀಟರ್ ನಂಬರ್ ಜತೆಗೆ ಆಧಾರ್‌ಕಾರ್ಡ್, ಗುರುತಿನ ಚೀಟಿಯನ್ನು ಲಿಂಕ್ ಮಾಡಬೇಕು ಎಂದು ಅವರು ಹೇಳಿ, ಸ್ವಂತ ಮನೆ, ಬಾಡಿಗೆ ಮನೆ ಎಲ್ಲರಿಗೂ ೨೦೦ ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುತ್ತೇವೆ. ಯಾವುದೇ ಗೊಂದಲ ಬೇಡ ಎಂದರು.
ಬೆಂಗಳೂರಿನ ಬೆಸ್ಕಾಂ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂಧನ ಸಚಿವ ಕೆ.ಜೆ ಜಾರ್ಜ್ ಅವರು, ಗೃಹ ಜ್ಯೋತಿ ಯೋಜನೆ ಜಾರಿಗೆ ಎಲ್ಲಾ ಸಿದ್ಧತೆ ಕೈಗೊಳ್ಳಲಾಗಿದೆ. ೨೦೦ ಯೂನಿಟ್ ವರಗೆ ಉಚಿತ ವಿದ್ಯುತ್ ನೀಡಲಾಗುತ್ತದೆ. ಗೃಹ ಬಳಕೆ ಬಳಕೆದಾರರು ಸರಾಸರಿ ಒಂದು ವರ್ಷ ಬಳಕೆ ಮಾಡಿದ ವಿದ್ಯುತ್ ಅಂಕಿ ಅಂಶಗಳನ್ನು ಪಡೆದುಕೊಂಡು ಉಚಿತವಾಗಿ ವಿದ್ಯುತ್ ನೀಡಲಾಗುತ್ತದೆ ಎಂದರು.ಪ್ರತಿ ಮನೆಗೊಂದು ಪ್ರತ್ಯೇಕ ಮೀಟರ್ ಇದ್ದು, ಆ ಮೀಟರ್ ಗೆ ಆರ್ ಆರ್ ನಂಬರ್ (ರೆವಿನ್ಯೂ ರಿಜಿಸ್ಟರ್ ನಂಬರ್) ಕೊಡಲಾಗಿರುತ್ತದೆ. ಗೃಹ ಜ್ಯೋತಿ ಸೌಲಭ್ಯವನ್ನು ಪಡೆಯಲು ಇಚ್ಛಿಸುವ ಬಾಡಿಗೆದಾರರು ತಮ್ಮ ಮನೆಯ ಮೀಟರ್ ನ ಆರ್ ಆರ್ ನಂಬರ್ ಗೆ ತಾವು ತಮ್ಮ ಮನೆ ಮಾಲೀಕರೊಂದಿಗೆ ಮಾಡಿಕೊಂಡಿರುವ ಬಾಡಿಗೆ ಕರಾರು ಪತ್ರದ ಜೆರಾಕ್ಸ್ ಪ್ರತಿಯನ್ನು ಹಾಗೂ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ನೀಡಿ ಲಿಂಕ್ ಮಾಡಿಸಬೇಕು.
ಒಂದು ವೇಳೆ ಕರಾರು ಪತ್ರ ಇಲ್ಲದಿದ್ದರೆ, ತಾವಿರುವ ಮನೆಯ ವಿಳಾಸದ ಆಧಾರ್‌ಕಾರ್ಡ್ ಅಥವಾ ಇತರೆ ದಾಖಲೆ ನೀಡಿದರೆ ಪರಿಶೀಲನೆ ನಡೆಸಿ, ಯೋಜನೆ ಫಲಾನುಭವಿಗಳಾಗಿ ಮಾಡುತ್ತೇವೆ ಎಂದು ನುಡಿದರು.ಜೂನ್ ೧೫ ರಿಂದ ಯೋಜನೆಯನ್ನು ಜಾರಿ ಮಾಡುತ್ತೇವೆ. ಗ್ರಾಹಕರು ಸರಾಸರಿ ಬಿಲ್ ಗಿಂತ ಹೆಚ್ಚು ಉಪಯೋಗ ಮಾಡಿದರೆ ಹೆಚ್ಚುವರಿ ಬಳಕೆಗೆ ಬಿಲ್ ಕಟ್ಟಬೇಕಿದೆ ಎಂದು ಅವರು ಇದೇ ವೇಳೆ ಉಲ್ಲೇಖಿಸಿದರು.ಅರ್ಜಿ ಸಲ್ಲಿಕೆ ಕೊನೆ ದಿನ: ಜೂನ್ ೧೫ ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ. ಅರ್ಜಿ ಸಲ್ಲಿಕೆಗೆ ಜುಲೈ ೧೫ ಕೊನೆಯ ದಿನವಾಗಿದೆ.ಹೊಸ ಮನೆ ನಿರ್ಮಾಣ ಮಾಡಿದವರು ಹಾಗೂ ಬಾಡಿಗೆಗೆ ಹೊಸದಾಗಿ ಬಂದಂತವರಿಗೆ ಈ ಯೋಜನೆ ಅನ್ವಯ ಆಗುತ್ತಾ? ಎಂಬ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಒಟ್ಟು ೨.೧೬ ಕೋಟಿ ಗ್ರಾಹಕರು ಇದ್ದಾರೆ. ಈ ಪೈಕಿ ೨೦೦ ಯೂನಿಟ್ ಗಿಂತಕಡಿಮೆ ಬಳಕೆ ಮಾಡುವ ಗ್ರಾಹಕರು ೨.೧೪ ಕೋಟಿ ಇದ್ದು, ಈ ಗ್ರಾಹಕರು ಸರಾಸರಿ ೫೩ ಯೂನಿಟ್ ವಿದ್ಯುತ್ ಬಳಕೆ ಮಾಡುತ್ತಾರೆ. ಎರಡು ಲಕ್ಷ ಜನರು ೨೦೦ ಯೂನಿಟ್ ಹೆಚ್ಚು ಬಳಕೆ ಮಾಡುತ್ತಾರೆ ಎಂದು ಅವರು ವಿವರಿಸಿದರು.
ಉಚಿತ ಯೋಜನೆ ಅಡಿಯಲ್ಲಿ ಗ್ರಾಹಕರು ನಿಗದಿತ ಶುಲ್ಕವನ್ನು ಕಟ್ಟುವ ಹಾಗಿಲ್ಲ. ಆದರೆ ಸರಾಸರಿ ಬಳಕೆಗಿಂತ ಹೆಚ್ಚುವರಿ ಬಳಕೆ ಮಾಡಿದರೆ ಅಂತಹ ಗ್ರಾಹಕರು ನಿಗದಿತ ಶುಲ್ಕ ಕಟ್ಟಬೇಕಿದೆ ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ವಿದ್ಯುತ್ ದರ ಏರಿಕೆ ನಾವು ಮಾಡಿದ್ದಲ್ಲ
ವಿದ್ಯುತ್ ದರ ಏರಿಕೆಯನ್ನು ನಾವು ಮಾಡಿಲ್ಲ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ದರ ಏರಿಕೆಯಾಗಿತ್ತು. ಚುನಾವಣಾ ಘೋಷಣೆಯಾದ ಕಾರಣದಿಂದ ಅದನ್ನು ತಡೆಹಿಡಿಯಲಾಗಿತ್ತು, ಚುನಾವಣೆ ಮುಗಿದ ನಂತರ ದರ ಏರಿಕೆ ಜಾರಿಯಾಗಿದೆ ಎಂದರು.

ಅರ್ಜಿ ಸಲ್ಲಿಕೆ ಹೇಗೆ
ಸೇವಾಸಿಂಧು ಪೋರ್ಟಲ್‌ನಲ್ಲಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕಂಪ್ಯೂಟರ್, ಮೊಬೈಲ್ ನಿಂದ ಆಕ್ಸಸ್ ಪಡೆಯಬಹುದಾಗಿದೆ.
ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಸೆಂಟರ್ ಗಳಲ್ಲಿ ಅವಕಾಶ. ಜೂನ್ ೧೫ ರಿಂದ ಪ್ರಾರಂಭ ಮಾಡುತ್ತೇವೆ.
ಸರ್ವರ್ ಸಮಸ್ಯೆ ಆಗದಂತೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

೧೩ ಸಾವಿರ ಕೋಟಿ ಹೊರೆ
ಗೃಹ ಜ್ಯೋತಿ ಯೋಜನೆ ಜಾರಿಗೆ ಒಟ್ಟು ೧೩ ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಸಚಿವರು ಉಲ್ಲೇಖ ಮಾಡಿದರು.