ಬೆಂಗಳೂರು,ಜೂ.೨೦-೨೦೦ ಯೂನಿಟ್ ಉಚಿತ ವಿದ್ಯುತ್ ಪಡೆಯುವ ಗೃಹ ಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಬೆಸ್ಕಾಂನಲ್ಲಿ ಇದುವರೆಗೆ ೧,೬೧,೯೫೮ ಗ್ರಾಹಕರು ಯೋಜನೆಗೆ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ ಎಂದು ಎಸ್ಕಾಂ ಮಾಹಿತಿ ನೀಡಿದೆ.
ಮೊದಲ ದಿನವಾದ ಭಾನುವಾರಕ್ಕೆ ಹೋಲಿಸಿದರೆ ನಿನ್ನೆ ನೋಂದಣಿಯಾದ ಗ್ರಾಹಕರ ಸಂಖ್ಯೆ . ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಸುಗಮವಾಗಿ ನಡೆದಿದೆ. ಒಂದೇ ದಿನ ೧,೦೬,೯೫೮ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯೋಜನೆಯ ನೋಂದಣಿ ಪ್ರಕ್ರಿಯೆಯು ತುಂಬಾ ಸರಳವಾಗಿದೆ ಮತ್ತು ಗ್ರಾಹಕರು ಯಾವುದೇ ದಾಖಲೆಗಳನ್ನು ಒದಗಿಸುವ ಅಗತ್ಯವಿಲ್ಲ. ನೋಂದಣಿ ಮಾಡಲು ವಿದ್ಯುತ್ ಬಿಲ್‌ನಲ್ಲಿ ಖಾತೆ ಸಂಖ್ಯೆ, ಗ್ರಾಹಕರ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿದರೆ ಸಾಕು.
ನೋಂದಣಿ ಪ್ರಕ್ರಿಯೆ ರಾಜ್ಯದ ಎಲ್ಲ ಕರ್ನಾಟಕ ಒನ್, ಗ್ರಾಮ ಒನ್ ಹಾಗು ಬೆಂಗಳೂರು ಒನ್ ಕೇಂದ್ರಗಳಲ್ಲಿ ನಡೆಯುತ್ತಿದೆ. ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in ಮೂಲಕ ನೋಂದಣಿ ಮಾಡಲಾಗುತ್ತಿದೆ.
ನೋಂದಣಿ ಪ್ರಕ್ರಿಯೆಗೆ ಯಾವುದೇ ಗಡುವು ಇಲ್ಲ. ಹಾಗಾಗಿ ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ ತಿಂಗಳ ವಿದ್ಯುತ್ ಬಳಕೆಯ ಬಿಲ್ ಅನ್ನು ಗ್ರಾಹಕರು ಪಾವತಿ ಮಾಡಬೇಕಿದ್ದು, ಜುಲೈ ತಿಂಗಳಿನಿಂದ ಬಳಸುವ ವಿದ್ಯುತ್ ಉಚಿತವಾಗಿರುತ್ತದೆ. ಇದಕ್ಕೆ ಷರತ್ತುಗಳನ್ನು ವಿಧಿಸಿದ್ದು ಷರತ್ತುಗಳ ಅನ್ವಯ ವಿದ್ಯುತ್ ಬಳಕೆ ಮಾಡಿದಾಗ ಮಾತ್ರ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಈ ಯೋಜನೆ ಎಲ್ಲರಿಗೂ ಅನ್ವಯಿಸಲಿದ್ದು, ರಾಜ್ಯದಲ್ಲಿ ವಾಸಿಸುವ ಎಲ್ಲರೂ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಬಾಡಿಗೆ ಮನೆಯವರು ಕೂಡ ಉಚಿತ ವಿದ್ಯುತ್ ಪಡೆಯಲು ಅವಕಾಶ ಇದೆ.
ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೋಂದಣಿಗೆ ವೆಬ್‌ಸೈಟ್ ಸರ್ವರ್ ಸಮಸ್ಯೆ ಮುಂದುವರಿದಿದೆ. ಸೇವಾ ಸಿಂಧು ಮತ್ತು ಸೈಬರ್ ಸೆಂಟರ್‌ಗಳ ಮುಂದೆ ಗ್ರಾಹಕರು ಬೆಳಗ್ಗೆಯಿಂದ ಸಂಜೆಯವರೆಗೆ ಕಾದರೂ ವೆಬ್‌ಸೈಟ್ ಮಾತ್ರ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಗ್ರಾಹಕರು ಹಿಡಿಶಾಪ ಹಾಕುತ್ತಿರುವ ಘಟನೆಗಳು ನಡೆದಿವೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಖಾತರಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಗೆ ಅರ್ಜಿಗಳನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ. ಆದರೆ ಮೊದಲ ದಿನ ಸರ್ವರ್ ಸಮಸ್ಯೆಯಿಂದ ಯಾವುದೇ ಗ್ರಾಹಕರು ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಲು ಸಾಧ್ಯವಾಗಲಿಲ್ಲ. ಎರಡನೆ ದಿನವಾದ ಸೋಮವಾರ ಬೆಳಗ್ಗೆಯೂ ಗ್ರಾಹಕರು ಆಧಾರ್ ಕಾರ್ಡ್ ಹಾಗೂ ಕರೆಂಟ್ ಬಿಲ್ ಹಿಡಿದು ಸರತಿ ಸಾಲಿನಲ್ಲಿ ನಿಂತು ಹೆಸರು ನೋಂದಾಯಿಸಿಕೊಂಡರೂ ಗ್ರಾಹಕರು ಸರ್ವರ್ ಸಮಸ್ಯೆ ಎದುರಿಸಬೇಕಾಯಿತು, ಸರ್ವರ್ ಮಾತ್ರ ಕಾರ್ಯನಿರ್ವಹಿಸದ ಕಾರಣ ಸಾರ್ವಜನಿಕರು ನಿರಾಸೆಯಿಂದ ಮನೆಗೆ ತೆರಳಿದರು.
ಸರ್ವರ್ ಕಣ್ಣುಮುಚ್ಚಾಲಿಯಿಂದ ಕೆಲವರು ನಾಳೆ ಬರುತ್ತೇವೆ ಎಂದು ಮನೆಗಳಿಗೆ ಹೋದರೆ, ಕೆಲಸ ಬಿಟ್ಟು ಇನ್ನೊಂದು ದಿನ ಬರಬೇಕು ಎಂದು ಹಿಡಿಶಾಪ ಹಾಕಿದ ಘಟನೆಗಳು ನಡೆದಿವೆ. ಸಂಜೆ ವೇಳೆಗೆ ಸರ್ವರ್ ಬಂದಾಗ ನೋಂದಣಿಗಾಗಿ ಕೆಲ ಕೇಂದ್ರಗಳಲ್ಲಿ ನೂಕುನುಗ್ಗಲು ಉಂಟಾಗಿತ್ತು. ಸರಕಾರ ಆದಷ್ಟು ಬೇಗ ಸರ್ವರ್ ಸಮಸ್ಯೆ ಬಗೆಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.