ಗೃಹಜ್ಯೋತಿ ಅರ್ಜಿ ಸಲ್ಲಿಕೆ ಆರಂಭ

ಬೆಂಗಳೂರು,ಜೂ.೧೮:ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಾದ ಗೃಹಜ್ಯೋತಿಗೆ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಫ್‌ಲೈನ್ ಮತ್ತು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಎಲ್ಲ ಎಸ್ಕಾಂ ಕಚೇರಿಗಳಲ್ಲಿ, ನಾಡ ಕಚೇರಿಗಳಲ್ಲೂ ಅರ್ಜಿ ಸಲ್ಲಿಸಬಹುದಾಗಿದ್ದು, ಭಾನುವಾರವಾದ ಇಂದೂ ಕೂಡ ಈ ಕಚೇರಿಗಳು ತೆರೆದಿವೆ. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಭಾನುವಾರವೂ ಈ ಕಚೇರಿಗಳನ್ನು ತೆರೆಯಲಾಗಿದೆ.
ಸರ್ವರ್ ಡೌನ್ ಪರದಾಟ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಹೆಚ್ಚಿನ ಜನ ಮುಂದಾದ ಕಾರಣ ಸೇವಾಸಿಂಧು ಪೋರ್ಟಲ್ ಸರ್ವರ್ ಡೌನ್ ಆಗಿದ್ದು, ಅರ್ಜಿ ಸಲ್ಲಿಸಲು ಅಡ್ಡಿಯಾಗಿದೆ. ಅಧಿಕಾರಿಗಳು ತಾಂತ್ರಿಕ ಪರಿಣತರನ್ನು ಕರೆಯಿಸಿ ಸರ್ವರ್‌ನ್ನು ಸರಿಪಡಿಸುವ ಕೆಲಸ ನಡೆಸಿದ್ದಾರೆ.
ಇಂದು ಬೆಳಿಗ್ಗೆ ೧೧ ಗಂಟೆಯಿಂದ ಗೃಹಜ್ಯೋತಿ ಯೋಜನೆಯ ಅರ್ಜಿ ಸಲ್ಲಿಕೆ ಕೆಲವೇ ಕ್ಷಣಗಳಲ್ಲಿ ಪೋರ್ಟಲ್‌ನ ಸರ್ವರ್ ಸ್ಥಗಿತಗೊಂಡಿತ್ತು. ಸರ್ವರ್ ಸರಿಹೋದ ನಂತರ ಆನ್‌ಲೈನ್‌ನಲ್ಲೂ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಮೊಬೈಲ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ.