ಬೆಂಗಳೂರು, ಜೂ.೨೧- ಗೃಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಬಿರುಸುಗೊಂಡಿದೆ. ಮತ್ತೊಂದೆಡೆ, ಸರ್ವರ್ ಸಮಸ್ಯೆ ಮುಂದುವರೆದಿದ್ದು, ಅರ್ಜಿದಾರರು ಪರದಾಟ ನಡೆಸುತ್ತಿದ್ದಾರೆ.
ಕಳೆದ ನಾಲ್ಕು ದಿನಗಳಿಂದಲೂ ಇದೇ ಸಮಸ್ಯೆ ಉಲ್ಬಣಗೊಂಡಿದ್ದು, ಅರ್ಜಿ ಸಲ್ಲಿಸಲು ಗಂಟೆ ಗಟ್ಟಲೇ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ಇನ್ನೂ, ರಾಜ್ಯಾದ್ಯಂತ ಕಳೆದ ಮೂರು ದಿನಗಳಲ್ಲಿ ಒಟ್ಟು ೮,೧೬,೬೩೧ ಗ್ರಾಹಕರು ಯೋಜನೆಗೆ ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಮಂಗಳವಾರ ಸಂಜೆ ವೇಳೆಗೆ ಒಟ್ಟು ೮,೧೬,೬೩೧ ಮುಟ್ಟಿದ್ದು, ಕಳೆದ ಎರಡು ದಿನಗಳಿಗೆ ಹೋಲಿಸಿದರೆ, ನೋಂದಣಿ ಸಂಖ್ಯೆ ಮೂರು ಪಟ್ಟು ಹೆಚ್ಚಳಗೊಂಡಿದೆ.
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಯೋಜನೆಯಡಿ ಪ್ರತಿ ಗೃಹ ಬಳಕೆಯ ಗ್ರಾಹಕರಿಗೆ ಮಾಸಿಕ ೨೦೦ ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವಂತ ಯೋಜನೆಗೆ ಅರ್ಜಿ ಸಲ್ಲಿಕೆ ಶುರುವಾಗಿ ನಾಲ್ಕು ದಿನವಾಗಿದೆ, ಇಂದೂ ಸಹ ಕೆಲವಡೆ ಸರ್ವರ್ ಡೌನ್ ಆದ ಪರಿಣಾಮ ಅರ್ಜಿ ಸಲ್ಲಿಸಲು ಪರದಾಡುವಂತಾಗಿದೆ.
ಅರ್ಜಿ ಸಲ್ಲಿಸುವ ಗ್ರಾಹಕರು ಸೇವಾ ಸಿಂಧು ಪೋರ್ಟಲ್ http://sevasindhugs.karnataka.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್ ಗಳಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.ಸರ್ವರ್ ಸಮಸ್ಯೆಯ ನಡುವೆಯೂ ಹೊಸ ಅರ್ಜಿದಾರರ ಸಂಖ್ಯೆ ದುಪ್ಪಟ್ಟು ಆಗಿದೆ.