ಗೂರ್ಖ ಕೆಲಸ ಮಾಡುತ್ತಿದ್ದ ನೇಪಾಳಿ ವೃದ್ಧ ಮೃತ್ಯು


ಕಡಬ, ಎ.೫- ಇಲ್ಲಿನ ಪೇಟೆಯಲ್ಲಿ ಹಲವು ವರ್ಷಗಳಿಂದ ಗೂರ್ಖನಾಗಿ ಕೆಲಸ ಮಾಡುತ್ತಿದ್ದ ನೇಪಾಳಿ ಮೂಲದ ವೃದ್ದ ರಾಮ್‌ಪ್ರಸಾದ್ ಸಿಂಗ್ (೮೦) ಮಲಗಿದ್ದಲ್ಲೇ ಎ.೩ರ ಶನಿವಾರದಂದು ಸಾವನ್ನಪ್ಪಿದ್ದಾರೆ.
ಇವರು ಕಡಬ ಗೂರ್ಖಸ್ ಎಂದೇ ಹೆಸರುವಾಸಿಯಾಗಿದ್ದು, ಕಡಬದ ಜನತೆಗೆ ಚಿರಪರಿಚಿತರಾಗಿದ್ದರು. ಹಲವು ವರ್ಷಗಳ ಹಿಂದೆ ಇವರು ಕಡಬದಲ್ಲಿ ಖಾಕಿ ವೇಷಾಧಾರಿಯಾಗಿ, ಕೈಯಲ್ಲಿ ಕೋಲು ಹಿಡಿದು ಕಾವಲು ಕಾಯುತ್ತಿದ್ದು, ಪೊಲೀಸರಿಗೂ ಸಹಾಯ ಮಾಡುತ್ತಿದ್ದರು. ರಾಮ್‌ಪ್ರಸಾದ್ ಸಿಂಗ್ ಅವರು ಕಾಲೇಜು ರಸ್ತೆಯಲ್ಲಿ ಒಂದು ಟೆಂಟ್ ಮನೆ ಮಾಡಿ ವಾಸವಾಗಿದ್ದರು. ವೃದ್ದಾಪ್ಯದ ಸಮಯದಲ್ಲಿ ಇವರು ವಿಪರೀತ ಮದ್ಯಸೇವನೆ ಮಾಡುತ್ತಿದ್ದು, ಗಲೀಜು ಬಟ್ಟ ಧರಿಸಿ, ಗಡ್ಡ ಬೆಳೆಸಿ ಕಡಬ ಪೇಟೆಯಲ್ಲಿ ಅಲೆದಾಡುತ್ತಿದ್ದರು. ಎ.೨ರ ಶನಿವಾರಂದು ಕಡಬದ ಶ್ರೀ ದುರ್ಗಂಬಿಕಾ ಅಮ್ಮನವರ ದೇವಾಲಯದ ಸಮೀಪವಿರುವ ಅಶ್ವತ್ಥ ಕಟ್ಟೆಯಲ್ಲಿ ಮಲಗಿದ್ದ ಇವರು ಎ.೩ರಂದು ಎದ್ದೇಳದ ಸ್ಥಿತಿಯಲ್ಲಿದ್ದರು. ಈ ವೇಳೆ ಅವರನ್ನು ಕೋಡಿಂಬಾಳದ ರಘುರಾಮ ನಾಯ್ಕ್ ಹಾಗೂ ಮೊದಲಾದವರು ಉಪಚರಿಸಿದ್ದರು. ಆದರೆ, ಸಂಜೆಯ ವೇಳೆ ಅವರು ಕೊನೆಯುಸಿರೆಳೆದಿದ್ದಾರೆ. ಕಡಬ ಠಾಣಾಧಿಕಾರಿ ರುಕ್ಮ ನಾಯ್ಕ್, ಸಿಬ್ಬಂದಿ ಭವಿತ್ ರೈ, ಕಡಬ ಪಟ್ಟಣ ಪಂಚಾಯತ್ ಸಿಬ್ಬಂದಿ ಹರೀಶ್ ಬೆದ್ರಾಜೆ ಅವರು ಕಡಬ ಸಾರ್ವಜನಿಕ ಸ್ಮಶಾನದಲ್ಲಿ ರಾಮ್‌ಪ್ರಸಾದ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ.