ಚಿಸಿನೌ (ಮಾಲ್ಡೊವಾ), ಜು.೨೭- ಒಂದೆಡೆ ರಷ್ಯಾ-ಉಕ್ರೇನ್ ನಡುವಿನ ಕದನ ನಡೆಯುತ್ತಿದ್ದರೆ ಮತ್ತೊಂದೆಡೆ ಸನಿಹದ ಮಾಲ್ಡೊವಾದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಗೂಢಚಾರಿಕೆ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ರಾಜಧಾನಿ ಚಿಸಿನೌನಲ್ಲಿನ ರಷ್ಯಾದ ಬರೊಬ್ಬರಿ ೪೫ ರಾಜತಾಂತ್ರಿಕ ಸಿಬ್ಬಂದಿಯನ್ನು ಮಾಲ್ಡೊವಾ ಸರ್ಕಾರ ಉಚ್ಛಾಟಿಸಿದೆ. ಅಲ್ಲದೆ ಆಗಸ್ಟ್ ೧೫ರ ಒಳಗೆ ಉಚ್ಛಾಟಿಸಲ್ಪಟ್ಟ ಸಿಬ್ಬಂದಿ ಮರಳಿ ರಷ್ಯಾಗೆ ತೆರಳಬೇಕೆಂದು ಆದೇಶಿಸಿದೆ.
ಸದ್ಯ ೪೫ ರಾಜತಾಂತ್ರಿಕರನ್ನು ಉಚ್ಛಾಟಿಸಿರುವ ಹಿನ್ನೆಲೆಯಲ್ಲಿ ಇದೀಗ ಚಿಸಿನೌನಲ್ಲಿನ ರಷ್ಯಾದ ಸಿಬ್ಬಂದಿಯ ಸಂಖ್ಯೆ ೨೫ಕ್ಕೆ ಇಳಿದಿದೆ. ಸದ್ಯ ಇಷ್ಟೇ ಸಂಖ್ಯೆಯ ರಾಜತಾಂತ್ರಿಕ ಸಿಬ್ಬಂದಿಯನ್ನು ರಷ್ಯಾದ ರಾಜಧಾನಿಯಲ್ಲಿರುವ ಮಾಲ್ಡೊವಾ ರಾಯಬಾರಿ ಕಚೇರಿ ಕೂಡ ಹೊಂದಿದೆ. ಕಳೆದ ವರ್ಷದ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ಆಕ್ರಮಣ ಮಾಡಿದಂದಿನಿಂದ ರಷ್ಯಾವು ಬೇಹುಗಾರಿಕೆ ಹಾಗೂ ವಿರೋಧ ಪಕ್ಷಗಳ ಗುಂಪುಗಳನ್ನು ಗುಂಪುಗಳನ್ನು ಬೆಂಬಲಿಸುತ್ತಿದೆ ಎಂದು ಮಾಲ್ಡೊವಾ ಆರೋಪಿಸುತ್ತಾ ಬಂದಿತ್ತು. ಅಲ್ಲದೆ ಚಿಸಿನೌನಲ್ಲಿರುವ ರಾಯಬಾರಿ ಕಚೇರಿಯ ಕಟ್ಟಡದ ಛಾವಣಿ ಹಾಗೂ ಆಸುಪಾಸಿನಲ್ಲಿ ಬಳಸಲ್ಪಡುವ ಕಟ್ಟಡಗಳಲ್ಲಿ ರಷ್ಯಾವು ಕಣ್ಗಾವಲು ಉಪಕರಣಗಳನ್ನು ಅಳವಡಿಸಿರುವ ಬಗ್ಗೆ ಮಾಲ್ಡೊವಾದ ವಿದೇಶಾಂಗ ಸಚಿವಾಲಯವು ಆತಂಕ ವ್ಯಕ್ತಪಡಿಸಿತ್ತು. ಅಲ್ಲದೆ ಆಗಸ್ಟ್ ೧೫ರ ಒಳಗೆ ಉಚ್ಛಾಟಿಸಲ್ಪಟ್ಟ ಎಲ್ಲಾ ಸಿಬ್ಬಂದಿ ಮರಳಿ ತಮ್ಮ ರಷ್ಯಾಗೆ ಮರಳಬೇಕೆಂದು ಆದೇಶಿಸಿದೆ. ಸದ್ಯ ರಷ್ಯಾದ ೪೫ ಸಿಬ್ಬಂದಿಯನ್ನು ಮಾಲ್ಡೊವಾ ಉಚ್ಛಾಟಿಸಿದೆ. ಸದ್ಯಕ್ಕೆ ಮಾಲ್ಡೊವಾ ಸರ್ಕಾರದ ನೀತಿಯನ್ನು ರಷ್ಯಾ ತೀವ್ರವಾಗಿ ಖಂಡಿಸಿದ್ದು, ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ತಿಳಿಸಿದೆ. ಇನ್ನು ಕೇವಲ ೨೬ ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಮಾಲ್ಡೊವಾವು ಯುರೋಪ್‌ನ ಬಡ ಆರ್ಥಿಕತೆಗಳಲ್ಲಿ ಒಂದಾಗಿದ್ದು, ಅದರಲ್ಲೂ ರಷ್ಯಾ-ಉಕ್ರೇನ್ ಯುದ್ದದಿಂದಾಗಿ ಭಾರೀ ಅರ್ಥಿಕ ಸಂಕಷ್ಟ ಎದುರಿಸಿದೆ.