ಬೆಂಗಳೂರು,ಜೂ.೧೪-ವೇಗವಾಗಿ ಬಂದ ಗೂಡ್ಸ್ ಲಾರಿ ಸ್ಕೂಟರ್ ಗೆ ಡಿಕ್ಕಿ ಹೊಡೆದು ಸವಾರ ಮೃತಪಟ್ಟಿರುವ ದುರ್ಘಟನೆ ನಿನ್ನೆ ಮಧ್ಯರಾತ್ರಿ ಕಾಮಾಕ್ಷಿಪಾಳ್ಯದ ಮಾಗಡಿ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಲಗ್ಗೆರೆಯ ಸೋಮಶೇಖರ್(೪೦) ಮೃತಪಟ್ಟವರು,ಗೂಡ್ಸ್ ಲಾರಿ ಚಾಲಕ ಮಾಗಡಿ ಮುಖ್ಯ ರಸ್ತೆಯಲ್ಲಿ ನೈಸ್ ರಸ್ತೆಯ ಕಡೆಯಿಂದ ಸುಂಕದಕಟ್ಟೆಯ ಕಡೆಗೆ ಅತಿವೇಗವಾಗಿ ರಾತ್ರಿ೧.೪೦ರ ವೇಳೆ ಹೋಗುತ್ತಾ ಇದೇ ರಸ್ತೆಯ ಅರ್ಕಾವತಿ ಆಸ್ಪತ್ರೆಯ ರಸ್ತೆಯ ಡಿವೈಡರ್ ಗೆ ಡಿಕ್ಕಿ ಮಾಡಿ ಅದೇ ರಭಸದಲ್ಲಿ ಮುಂದಕ್ಕೆ ಚಲಿಸಿ ಡಿವೈಡರ್ ದಾಟಿ ಸುಂಕದಟ್ಟೆಯ ಕಡೆಯಿಂದ ನೈಸ್ ರಸ್ತೆಯ ಕಡೆಗೆ ಹೋಗುತ್ತಿದ್ದ ಹೊಂಡಾ ಆಕ್ಟಿವಾ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿಯ ರಭಸಕ್ಕೆ ಕೆಳಗೆಬಿದ್ದು ಗಂಭೀರವಾಗಿ ಗಾಯಗೊಂಡ ಸೋಮಶೇಖರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸೋಮಶೇಖರ್ ಲಾರಿ ಚಾಲಕನಾಗಿದ್ದು ಮಧ್ಯರಾತ್ರಿ ಕೆಲಸಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಗೂಡ್ಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಡಿಸಿಪಿ ಡಾ.ಸುಮನ್ ಪನ್ನೇಕರ್ ತಿಳಿಸಿದ್ದಾರೆ.