ಗೂಡಂಗಡಿಯಲ್ಲಿ ಎಣ್ಣೆ ಪಾರ್ಟಿ- ನಗರಸಭೆಯಿಂದ ಎಚ್ಚರಿಕೆ

ಪುತ್ತೂರು, ಮೇ ೩- ಜನತಾ ಕರ್ಫ್ಯೂ ನಡುವೆ ಗೂಡಂಗಡಿಯೊಂದರಲ್ಲಿ ಎಣ್ಣೆ ಪಾರ್ಟಿ ನಡೆಸುತ್ತಿದ್ದ ಇಬ್ಬರನ್ನು ನಗರಸಭಾ ಆರೋಗ್ಯ ನಿರೀಕ್ಷಕರು ಎಚ್ಚರಿಕೆ ನೀಡಿ ಕಳುಹಿಸಿದ ಘಟನೆ ನಡೆದಿದೆ.
ಕೊರೊನಾ ಆರ್ಭಟದ ಹಿನ್ನಲೆಯಲ್ಲಿ ಜನತಾ ಕರ್ಫ್ಯೂ ಜಾರಿಗೊಂಡಿದ್ದರೂ ಪುತ್ತೂರು ನಗರದ ಗೂಡಂಗಡಿಯೊಂದರಲ್ಲಿ ಇಬ್ಬರು ಸೇರಿಕೊಂಡು ಎಣ್ಣೆಪಾರ್ಟಿ ನಡೆಸುತ್ತಿರುವುದು ಈ ಆರೋಗ್ಯ ನಿರೀಕ್ಷಕರ ಕಣ್ಣಿಗೆ ಬಿತ್ತು. ಈ ಪಾನಪ್ರಿಯರನ್ನು ಕೋರೊನಾ ಮಾರ್ಷೆಲ್ ನಗರಸಭಾ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್ ಮತ್ತು ತಂಡ ಎಚ್ಚರಿಕೆ ನೀಡಿ ಗೂಡಂಗಡಿಯಿಂದ ವಾಪಾಸು ಕಳಿಸಿಕೊಟ್ಟರು.
ಪುತ್ತೂರಿನ ಕೋರ್ಟ್ ರಸ್ತೆಯ ಪಶುಸಂಗೋಪನಾ ಇಲಾಖೆಯ ಮುಂಭಾಗದಲ್ಲಿರುವ ಸಣ್ಣ ಗೂಡಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ. ಗೂಡಂಗಡಿಯ ಬಾಗಿಲು ತೆರೆದುಕೊಂಡು ಇಬ್ಬರು ವ್ಯಕ್ತಿಗಳು ಮದ್ಯಪಾನದಲ್ಲಿ ತೊಡಗಿದ್ದರು. ತಕ್ಷಣ ಆರೋಗ್ಯ ನಿರೀಕ್ಷಕರ ತಂಡ ಇವರನ್ನು ಗೂಡಂಗಡಿಯಿಂದ ಹೊರಬರುವಂತೆ ಸೂಚಿಸಿದರು. ಆದರೆ ಅದಾಗಲೇ ಅಮಲೇರಿದ್ದ ಈ ಇಬ್ಬರು ತೂರಾಡುತ್ತಾ ಗೂಡಂಗಡಿಯಿಂದ ಹೊರಬಂದರು. ಅವರಿಗೆ ಖಡಕ್ ಎಚ್ಚರಿಕೆ ನೀಡಿ ವಾಪಾಸು ಕಳುಹಿಸಲಾಯಿತು.
ಪುತ್ತೂರು-ಕಡಬ ಕೊರೊನಾ ಆರ್ಭಟ;
ಶನಿವಾರ ಪುತ್ತೂರು-ಕಡಬ ಅವಿಭಜಿತ ತಾಲೂಕಿನಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಇಳಿಮುಖವಾಗಿದ್ದರೆ, ಭಾನುವಾರ ಮತ್ತೆ ತನ್ನ ಆರ್ಭಟವನ್ನು ಹೆಚ್ಚುಗೊಳಿಸಿದೆ. ಭಾನುವಾರ ಆರೋಗ್ಯ ಇಲಾಖೆಯ ವರದಿಯಂತೆ ೧೦೬ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಪುತ್ತೂರು ತಾಲೂಕಿನಲ್ಲಿ ೭೧ ಮತ್ತು ಕಡಬ ತಾಲೂಕಿನಲ್ಲಿ ೩೫ ಮಂದಿಗೆ ಕೊರೊನಾ ದೃಢ ಪಟ್ಟಿದೆ.