ಗೂಗಲ್ ಮೀಟ್ ನಲ್ಲಿ ಗ್ರಂಥ ಬಿಡುಗಡೆ

ಕಲಬುರಗಿ,ನ.4-ಕತೆಗಾರ ಚನ್ನಪ್ಪ ಕಟ್ಟಿ ಅನುವಾದಿಸಿದ ಜಾಕ್ ಲಂಡನ್ ನ‌ ‘ಸ್ಕಾರ್ಲೆಟ್ ಪ್ಲೇಗ್’ ಮೇಲ್ನೋಟಕ್ಕೆ ಪ್ಲೇಗ್ ಮಹಾಮಾರಿಯ ಕತೆಯನ್ನು ಹೇಳುವಂತೆ ತೋರಿದರೂ ಅದರ ಮುಖ್ಯ ಫೋಕಸ್ ಇರುವುದು ಮನುಷ್ಯನ ಅಂತರಂಗದಲ್ಲಿ ಮನೆಮಾಡಿ ಕುಳಿತಿರುವ ಮಹಾಪಿಡುಗಿನ ದರ್ಶನ ಮಾಡಿಸುವುದೇ ಆಗಿದೆ. ಚರಿತ್ರೆಯ ಗಾಯಗಳು ಆತ್ಮಚರಿತ್ರೆಯ ವೃಣಗಳಾಗಿ ವಿಶ್ವದಲ್ಲಿ ದುರ್ಗಂಧವೆಬ್ಬಿಸಿರುದನ್ನು ನೂರಿಪ್ಪತ್ತು ಪುಟಗಳ ಕಿರುವ್ಯಾಪ್ತಿಯಲ್ಲಿ ಅನಾವರಣಗೊಳಿಸಿದೆ ಎಂದು ಅಕ್ಟೋಬರ್ ಮೂವತ್ತೊಂದರಂದು ೨೦೨೦ರ ಗೂಗಲ್ ಮೀಟ್ ನಲ್ಲಿ ಗ್ರಂಥ ಬಿಡುಗಡೆ ಮಾಡುತ್ತ ವಿಮರ್ಶಕ ಸಿರಾಜ್ ಅಹೆಮದ್ ಅಭಿಪ್ರಾಯಪಟ್ಟರು. ಮೂಲ ಇಂಗ್ಲಿಷ ಭಾಷೆಯಿಂದ ಕನ್ನಡ ಜಾಯಮಾನಕ್ಕೆ ಹೊಂದಿಕೊಳ್ಳುವಂತೆ ಚನ್ನಪ್ಪ ಕಟ್ಟಿ ಈ ಕೃತಿಯನ್ನು ಅನುವಾದಿಸಿದ್ದಾರೆ ಎಂದು ಹೇಳಿದ ಸಿರಾಜ ಅಹೆಮದ್ ಸಾಯವವರ ನೋವನ್ನು ಆಲಿಸದ, ಸತ್ತವರನ್ನು ಸಮಾಧಿ ಮಾಡಲಾಗದ, ಬದುಕಿದವರನ್ನು ಸಂತೈಸಲಾಗದ ಆತ್ಮವಿನಾಶಿ ಜನಾಂಗದ ಇಲ್ಲಿನ ಕಥನವು ಗಾಂಧೀಜಿ ಪರಿಭಾವಿಸಿದ್ದ ಸಟಾನಿಕ್ ಸಿವಿಲೈಜೇಶನ್ satanic civilization ಅನ್ನು ನೆನಪಿಸಿಕೊಡುತ್ತದೆ ಎಂದು ವಿಶ್ಲೇಷಿಸಿದರು.
ನಾಡಿನ ಹಿರಿಯ ಜಾನಪದ ವಿದ್ವಾಂಸರಾದ ಡಾ.ಎಂ.ಎಂ.ಪಡಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡುತ್ತ ಕವಿತೆ, ಕತೆ, ವಿಮರ್ಶೆ, ವೈಚಾರಿಕ ಕೃತಿಗಳನ್ನು ರಚಿಸುತ್ತಿದ್ದ ಸ್ನೇಹಿತ ಚನ್ನಪ್ಪ ಕಟ್ಟಿ ಇಂದು ಅನುವಾದ ಕ್ಷೇತ್ರಕ್ಕೆ ಬಂದಿದ್ದಾರೆ. ಅವರ ಈ ಹೊಸ ಕ್ರಿಯಾಶೀಲ ಪ್ರಯೋಗವನ್ನು ಸ್ವಾಗತಿಸೋಣ ಎಂದರು.
ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿಯ ಸದಸ್ಯ ಹಿರಿಯ ಕಾದಂಬರಿಕಾರ ಬಾಳಾಸಾಹೇಬ ಲೋಕಾಪುರ ಶುಭ ಹಾರೈಸುತ್ತ ಮೂಲ ಕೃತಿಯ ಹೆಸರನ್ನು ಇದ್ದಕ್ಕಿದ್ದ ಹಾಗೆ ಉಳಿಸಿಕೊಂಡ ಅನುವಾದ ಕೃತಿಗಳ ಹೆಸರುಗಳನ್ನು ಉಲ್ಲೇಖಿಸುತ್ತ ಅಂಥದೇ ಕಾರ್ಯವನ್ನು ಚನ್ನಪ್ಪ ಕಟ್ಟಿ ಮಾಡಿದ್ದಾರೆ ಎಂದು ತಿಳಿಸಿದರು.
ಗ್ರಂಥ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಮಹಾರಾಷ್ಟ್ರದ ಅಹೆಮದ್ ನಗರದ ಕಮಲಾಕರ ಭಟ್ಟ ಅನುವಾದ ಸಂದರ್ಭದಲ್ಲಿ ಅನುವಾದಕನು ತಾನು ಅನುಕರಣೆ ಮಾಡುತ್ತಿದ್ದೇನೆಂಬ ಕೀಳರಿಮೆ ಹೊಂದಿರಬಾರದು.ಅನುವಾದವನ್ನು ಭಿನ್ನವಾದ ಭಾಷೆಯೊಂದಿಗೆ ಹಾಗೂ ಸಂಸ್ಕೃತಿಯೊಂದಿಗೆ ನಡೆಯಿಸಿದ ಸಂವಾದವೆಂದು ಭಾವಿಸಬೇಕು ಎಂದು ಹೇಳಿದರು. ಮೂಲ ಕೃತಿಗೆ ನಿಷ್ಠವಾಗಿರುತ್ತಲೇ ಮರುಸೃಷ್ಟಿ ಮಾಡುವ ಕೆಲಸವನ್ನು ಅನುವಾದಕ ಚನ್ನಪ್ಪ ಕಟ್ಟಿ ಸಮರ್ಥವಾಗಿ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಬಾದಾಮಿಯ ವ್ಹಿ.ಟಿ.ಪೂಜಾರ, ದಾಂಡೇಲಿಯ ನಾಗರೇಖಾ ಗಾಂವಕರ, ಕಲಬುರಗಿಯ ಪರಿಮಳ ಕಮತರ ಹಾಗೂ ದಾವಣಗೇರಿಯ ಮಹಾಂತೇಶ ಪಾಟೀಲ ಅವರು ಅನುವಾದಕ
ಚನ್ನಪ್ಪ ಕಟ್ಟಿಯೊಂದಿಗೆ ಸಂವಾದ ನಡೆಸುತ್ತ ಪ್ರಸ್ತುತ ಅನುವಾದದ ಹಿಂದಿನ ಪ್ರೇರಣೆಯ ಕುರಿತು, ಅನುವಾದಕನ ಅನುಭಗಳ ಕುರಿತು ವಿವರಗಳನ್ನು ಪಡೆದರು.
ಸಾಹಿತ್ಯ ದಿಂಗಂತದ ರುಕ್ಮಿಣಿ ನಾಗಣ್ಣವರ ಅವರು ಗೂಗಲ್ ಮೀಟ್ ಕಾರ್ಯಕ್ರಮವನ್ನು ಆಯೋಜಿಸಿದ್ದರು. ನಾಗೇಶ ಹರಳಯ್ಯ ಸ್ವಾಗತಿಸಿದರು. ರಮಾ ದೊಡಮನಿ ವಂದನೆಗಳನ್ನು ಸಲ್ಲಿಸಿದರು.