
ಬೆಂಗಳೂರು,ಆ.೩೦-ಕೊಲೆಯತ್ನ,ಸುಲಿಗೆ, ಬೆದರಿಕೆ ಇನ್ನಿತರ ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ತರಲು ಯತ್ನಿಸಿದ ಕುಖ್ಯಾತ ರೌಡಿ ಇರ್ಫಾನ್ ಅಲಿಯಾಸ್ ರಹೀಮುಲ್ಲಾ ನನ್ನು ಗುಂಡಾ ಕಾಯ್ದೆಯಡಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆಶೋಕನಗರ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದ್ದ ಕುಖ್ಯಾತ ರೌಡಿ ಇರ್ಫಾನ್ ಅಲಿಯಾಸ್ ರಹೀಮುಲ್ಲಾ(೨೯) ಕಳೆದ ೨೦೧೩ ರಿಂದ ಅಪರಾಧ ಕೃತ್ಯಗಳಲ್ಲಿ, ಭಾಗಿಯಾಗುತ್ತಿದ್ದು ಜೈಲಿಗೆ ಹೋದರೂ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದು ಮತ್ತೆ ಹಳೆ ಚಾಳಿ ಮುಂದುವರೆಸುತ್ತಿದ್ದ.
ಹಲವಾರು ಬಾರಿ ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದರೂ ಬುದ್ದಿ ಕಲಿಯದೇ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದ. ಸುಮಾರು ೧೮ ಪ್ರಕರಣಗಳಲ್ಲಿ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಈತನ ವಿರುದ್ಧ ನ್ಯಾಯಾಲಯಗಳಿಂದ ವಾರಂಟ್ ಗಳು ಬಾಕಿ ಉಳಿದಿದ್ದವು, ಸಿಸಿಬಿ ಅಧಿಕಾರಿಗಳು ಸತತ ಪ್ರಯತ್ನದಿಂದ ತಲೆಮರೆಸಿಕೊಂಡಿದ್ದ ರೌಡಿಯನ್ನು ಕೊಲೆ ಪ್ರಯತ್ನ ಕೇಸಿನ ವಾರೆಂಟ್ ನಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಸಿಸಿಬಿ ಸಂಘಟಿತ ಅಪರಾಧ ದಳದ ಅಧಿಕಾರಿಗಳು ಇರ್ಫಾನ್, ಕಳೆದ ೧೦ ವರ್ಷಗಳಲ್ಲಿ ಬಾಗಿಯಾಗಿರುವ ಎಲ್ಲಾ ಅಪರಾಧ ಪ್ರಕರಣಗಳು ದಾಖಲೆಗಳನ್ನು ಸಂಗ್ರಹಿಸಿ ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ತಿಳಿಸಿದರು.