ಗೂಂಡಾ ಕಾಯ್ದೆಯಡಿ ಮಟ್ಕಾ ಕಿಂಗ್ ಬಂಧನ

ತುಮಕೂರು, ಏ. ೧೫- ಪಾವಗಡ ತಾಲ್ಲೂಕಿನ ಪ್ರಮುಖ ಮಟ್ಕಾ ಕಿಂಗ್ ಪಿನ್‌ನನ್ನು ಪಾವಗಡ ಪೊಲೀಸರು ಪತ್ತೆಹಚ್ಚಿ ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ.
ಪಾವಗಡ ಪಟ್ಟಣದ ಹಳೇ ಕುಂಬಾರ ಬೀದಿಯ ವಾಸಿ ಮಟ್ಕಾ ಬುಕ್ಕಿ ಅಶ್ವಥ ಎಂಬಾತನೇ ಬಂಧಿತ ಆರೋಪಿ. ಈತನ ವಿರುದ್ಧ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನ ಒಳಪಡಿಸಲಾಗಿದೆ.
ಬಂಧಿತ ಆರೋಪಿ ಮಧುಗಿರಿ ಉಪವಿಭಾಗ ವ್ಯಾಪ್ತಿಯ ಪಾವಗಡ ತಾಲ್ಲೂಕಿನಲ್ಲಿ ಹಲವಾರು ವರ್ಷಗಳಿಂದ ವ್ಯಾಪಕವಾಗಿ ಮಟ್ಕಾ ಜೂಜಾಟದ ದಂಧೆಯನ್ನು ನಡೆಸುತ್ತಾ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ.
ಈತ ಮಟ್ಕಾ ಜೂಜು ದಂಧೆಯನ್ನು ನಿಲ್ಲಿಸದೇ ರೂಢಿಗತವಾಗಿ ಮಟ್ಕಾ ಆಡಿಸುತ್ತಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ ತಿಳಿಸಿದ್ದಾರೆ.
ಬಂಧಿತ ಅಶ್ವಥಪ್ಪನನ್ನು ಸ್ಥಾನ ಬದ್ದತೆಯಲ್ಲಿ ಇಡುವಂತೆ ಕೋರಿ ಮಧುಗಿರಿ ಉಪವಿಭಾಗದ ಡಿ.ವೈ.ಎಸ್.ಪಿ. ಕೆ.ಜಿ.ರಾಮಕೃಷ್ಣ ರವರ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೂಲಕ ಸಲ್ಲಿಸಿದ ಪ್ರಸ್ತಾವನೆಯ ಮೇರೆಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಕರ್ನಾಟಕ ಅಕ್ರಮ ಭಟ್ಟಿ ಸಾರಾಯಿ ವ್ಯವಹಾರ, ಔಷಧಾಪರಾಧ, ಜೂಜುಕೋರ, ಅನೈತಿಕ ವ್ಯವಹಾರಗಳ ಅಪರಾಧ ಮತ್ತು ಕೊಳಚೆ ಪ್ರದೇಶಗಳನ್ನು ಅಕ್ರಮವಾಗಿ ಆಕ್ರಮಿಸುವ ಚಟುವಟಿಗೆಗಳ ತಡೆ ಅಧಿನಿಯಮ ೧೯೮೫ (೧೯೮೫ ಕರ್ನಾಟಕಕಾಯ್ದೆ ಸಂಖ್ಯೆ ೧೨)?ರ ಅಡಿಯಲ್ಲಿ ಅಶ್ವಥ @ ಪಿ.ಎನ್.ಅಶ್ವಥನಾರಾಯಣನನ್ನು ಜಿಲ್ಲಾ ಕಾರಾಗೃಹದಲ್ಲಿ ಬಂಧನದಲ್ಲಿಡಲು ?ಸ್ಥಾನ ಬದ್ಧತೆ? ಆದೇಶ ಮಾಡಿದ್ದಾರೆ. ಅದರಂತೆ ಬಂಧಿತನನ್ನು ಜಿಲ್ಲಾ ಕಾರಾಗೃಹದಲ್ಲಿ ಬಂಧನದಲ್ಲಿಡಲಾಗಿದೆ.
ಸದರಿ ಆರೋಪಿಯನ್ನು ಬಂಧಿಸಲು ಶ್ರಮಿಸಿದ ಅಡಿಷನಲ್ ಎಸ್ಪಿ ಉದೇಶ ಮಾರ್ಗದರ್ಶನದಲ್ಲಿ ಮಧುಗಿರಿ ಡಿವೈಎಸ್ಪಿ ಕೆ.ಜಿ. ರಾಮಕೃಷ್ಣ, ಪಾವಗಡ ವೃತ್ತ ನಿರೀಕ್ಷಕ ನಾಗರಾಜು.ಡಿ ಮತ್ತು ಮಧುಗಿರಿ ಉಪವಿಭಾಗದ ಕಚೇರಿಯ ಸಿಬ್ಬಂದಿಗಳು ಹಾಗೂ ಪಾವಗಡ ಠಾಣೆ ಸಿಬ್ಬಂದಿಯ ಕಾರ್ಯವೈಖರಿ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.