ಗುವಿವಿ ಶುಲ್ಕ ಹೆಚ್ಚಳ ಪ್ರಸ್ತಾವ ಕೈ ಬಿಡಲು ಎಐಡಿಎಸ್‍ಓ ಆಗ್ರಹ

ಕಲಬುರಗಿ,ಜ.18-ಗುಲ್ಬರ್ಗಾ ವಿಶ್ವವಿದ್ಯಾಲಯವು ಉನ್ನತ ಶಿಕ್ಷಣ ಇಲಾಖೆಯ ಸೂಚನೆ ಮೇರೆಗೆ ವಿವಿಧ ಸ್ನಾತಕ ಹಾಗೂ ಸ್ನಾತಕೋತ್ತರ ಕೋರ್ಸಗಳ ಪ್ರವೇಶ ಶುಲ್ಕವನ್ನು ಪ್ರಸ್ತುತ ಶೈಕ್ಷಣಿಕ ಅವಧಿಯಿಂದ ಮೂರು ಪಟ್ಟು ಹೆಚ್ಚಿಸಲು ಮುಂದಾಗಿರುವುದನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‍ಓ) ಜಿಲ್ಲಾ ಕಾರ್ಯದರ್ಶಿ ತುಳಜಾರಾಮ ಎನ್.ಕೆ. ಖಂಡಿಸಿದ್ದಾರೆ.
ಗು.ವಿ.ವಿದಲ್ಲಿ ಓದುವಂತಹ ವಿದ್ಯಾರ್ಥಿಗಳ ಸಂಖ್ಯೆ ಈಗಾಗಲೇ ಕುಸಿಯುತ್ತಿದೆ. ಕಳೆದ 3 ವರ್ಷಗಳಿಂದ ಅಂದರೆ ಕೋವಿಡ್ ನಂತರ ಭೀಕರ ಆರ್ಥಿಕ ಬಿಕ್ಕಟ್ಟಿನಿಂದಾಗಿ ದಾಖಲಾತಿ ಸಂಖ್ಯೆ ಕ್ರಮೇಣವಾಗಿ ಇಳಿದಿದೆ. ಬಹುತೇಕ ವಿದ್ಯಾರ್ಥಿಗಳು ಪದವಿ ಶಿಕ್ಷಣ ಬಿಟ್ಟು ಮುಂಬೈ, ಪುಣೆ, ಬೆಂಗಳೂರು ನಗರ ಪ್ರದೇಶಗಳಿಗೆ ದುಡಿಯಲು ಗುಳೆ ಹೋಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಲವೇ ಕೆಲವು ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ವಿಶ್ವವಿದ್ಯಾಲಯದಲ್ಲಿ ಪ್ರವೇಶಾತಿ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳು ಈಗಿರುವ ಶುಲ್ಕ ಭರಿಸುವುದಕ್ಕೆ ಪರದಾಡುವಂತಾಗಿದ್ದು, ಶುಲ್ಕ ಏರಿಕೆಯು ಮತ್ತಷ್ಟು ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿನ ಮೇಲೆ ತಣ್ಣೀರು ಎರೆಚಿದಂತಾಗುತ್ತದೆ. ವಿಶ್ವವಿದ್ಯಾಲಯವು ಬಡ ವಿದ್ಯಾರ್ಥಿಗಳಿಗೆ ಉನ್ನತ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಶುಲ್ಕ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕಳೆದ ವರ್ಷ ವಿದ್ಯಾರ್ಥಿಗಳು 4650/-ಶುಲ್ಕ ಪಾವತಿ ಮಾಡಿದ್ದರೆ, ಈ ಬಾರಿ ಆ ಮೊತ್ತವನ್ನು 14,450 ಕ್ಕೆ ಹೆಚ್ಚಿಸಲಾಗಿದೆ. ಸ್ನಾತಕೋತ್ತರ ಕೋರ್ಸ್‍ನ ವಿಜ್ಞಾನ, ಮತ್ತಿತರ ವಿಷಯಗಳ ಕೋರ್ಸ್‍ಗೆ 30,000ರವರೆಗೂ ಹೆಚ್ಚಿಸಲಾಗಿದೆ. ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಈಗಾಗಲೇ ವಿದ್ಯಾಭ್ಯಾಸ ತೊರೆಯುತ್ತಿರುವ ಬಡ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಈ ನಿರ್ಧಾರ ಬರ ಸಿಡಿಲು ಬಡಿದಂತಾಗಿದೆ. ಗ್ರಾಮೀಣ ಪ್ರದೇಶದ ಬಡ ಕಾರ್ಮಿಕರ ಕುಟುಂಬದಿಂದ ಬರುವ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ವಿಶ್ವ ವಿದ್ಯಾಲಯ ಶುಲ್ಕ ಹೆಚ್ಚಳದ ಪ್ರಸ್ತಾಪವನ್ನು ಈ ಕೂಡಲೇ ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.