ಗುವಿವಿ ಎನ್‌ಎಸ್‌ಎಸ್‌ ಕೋಶದಿಂದ ಕೊರೊನಾ ಜಾಗೃತಿ ಅಭಿಯಾನ

ಕಲಬುರಗಿ:ಮೇ.1: ಗುಲಬರ್ಗಾ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ಕೋಶದಿಂದ ನಗರದಲ್ಲಿ ಶುಕ್ರವಾರದಂದು ಕೊರೊನಾ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಅಶೋಕ ನಗರ, ಶಹಾಬಜಾರ್, ಬ್ರಹ್ಮಪುರ ಮತ್ತು ಕೇಂದ್ರ ಬಸ್ ನಿಲ್ದಾಣದ ಎದುರು ನಡೆದ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಎನ್‌ಎಸ್‌ಎಸ್‌ ಕೋಶದ ಸಂಯೋಜನಾಧಿಕಾರಿಗಳಾದ ಪ್ರೊ. ರಮೇಶ ಲಂಡನಕರ್ ಅವರು, ‘ಕೋವಿಡ್‌ ರೋಗಾಣುವಿನಿಂದ ಜನರು ರಕ್ಷಣೆ ಮಾಡಿಕೊಳ್ಳಬೇಕು. ವಿಶ್ವದಾದ್ಯಂತ ಲಕ್ಷಾಂತರ ಜನರು ತಮ್ಮ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಜನರಿಗೆ ಆರೋಗ್ಯ ಸೌಲಭ್ಯಗಳು ಸಮರ್ಪಕವಾಗಿ ಒದಗುತ್ತಿಲ್ಲ. ಕೊರೊನಾ ಮಹಾಮಾರಿ ಹಿಮ್ಮೆಟ್ಟಿಸಬೇಕೆಂದರೆ ಜನರು ಸರ್ಕಾರದ ನಿಯಮಗಳನ್ನು ಪಾಲನೆ ಮಾಡಬೇಕು. ಮನೆಯಿಂದ ಆಚೆ ಬರಬಾರದು. ಸರ್ಕಾರ ನಿಗದಿಪಡಿಸಿದ ಸಮಯದಲ್ಲಿ ಮನೆಯಿಂದ ಹೊರಬರಬೇಕಾದ ಸಂದರ್ಭದಲ್ಲಿ ಮುಖಗವಸು ಹಾಕಿಕೊಳ್ಳಬೇಕು. ಖರೀದಿ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದರು.

ಮನೆಯಲ್ಲೇ ಇದ್ದು ಕುಟುಂಬವನ್ನು ನೀವೇ ರಕ್ಷಣೆ ಮಾಡಿಕೊಳ್ಳಬೇಕು. ಸ್ವಚ್ಛತೆಯನ್ನು ಕಾಪಾಡಬೇಕು. ಸಾಬೂನು, ಸ್ಯಾನಿಟೈಜರ್‌ ಬಳಕೆ ಮಾಡಬೇಕು. ಕೋವಿಡ್ ಲಸಿಕೆಯನ್ನು ಪ್ರತಿಯೊಬ್ಬರೂ ಹಾಕಿಸಿಕೊಳ್ಳಬೇಕು ಎಂದರು.

ಅಭಿಯಾನದಲ್ಲಿ ವಿದ್ಯಾರ್ಥಿ ಕಲ್ಯಾಣ ವಿಭಾಗದ ಮುಖ್ಯಸ್ಥರಾದ ಪ್ರೊ. ಕೆ. ಸಿದ್ದಪ್ಪ, ಮಹಾನಗರ ಪಾಲಿಕೆ ಸಾರ್ವಜನಿಕ ಸಂಪರ್ಕಾಧಿಕಾರಿ ನಾಗರತ್ನಾ ದೇಶಮಾನೆ, ಎನ್‌ಎಸ್‌ಎಸ್‌ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.