ಗುಳೇದಗುಡ್ಡ ಸ್ವಯಂಪ್ರೇರಿತ ಮೂರು ದಿನ ಲಾಕ್‍ಡೌನ್

ಗುಳೇದಗುಡ್ಡ ಮೇ.21- ದಿನದಿಂದ ದಿನಕ್ಕೆ ಕರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ತಾಲೂಕಾ ಆಡಳಿತದ ಮನವಿ ಮೇರೆಗೆ ಸ್ಥಳೀಯ ಕಿರಾಣಿ ವ್ಯಾಪಾರಸ್ಥರು ಮೂರು ದಿನಗಳವರೆಗೆ ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಲು ತಹಸೀಲ್ದಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದರು. ತಹಸೀಲ್ದಾರ್ ಜಿ.ಎಂ. ಕುಲಕರ್ಣಿ ಕರೆದಿದ್ದ ವರ್ತಕರ ಸಭೆಯಲ್ಲಿ ಈ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಕಿರಾಣಿ ವರ್ತಕರ ಮುಖಂಡರಾದ ಮಹೇಶ ಬಿಜಾಪೂರ, ಪ್ರಶಾಂತ ಜವಳಿ, ಶ್ರೀಕಾಂತ ಧಾರವಾಡ ಅವರುಗಳು ಮಾತನಾಡಿ, ಕರೊನಾ ಸೋಂಕು ಹರಡುವಿಕೆಯನ್ನು ತಡೆಯಲು ಕಿರಾಣಿ ವರ್ತಕರು ಸ್ವಯಂಪ್ರೇರಿತವಾಗಿ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ತಾಲೂಕಾಡಳಿತದ ಜತೆ ನಾವು ಸಹ ಸಹಕರಿಸುತ್ತೇವೆ. ಅವರಿಗೆ ಅಗತ್ಯ ಸಹಕಾರ ಕೊಡುವುದು ನಮ್ಮ ಜವಾಬ್ದಾರಿ. ಕಾರಣ ವರ್ತಕರು ಸೋಂಕು ತಡೆಯಲು ನಾವೆಲ್ಲರೂ ತಾಲೂಕಾ ಆಡಳಿತದೊಂದಿಗೆ ಕೈಜೋಡಿಸುತ್ತೇವೆ ಅದು ನಮ್ಮ ಕರ್ತವ್ಯವಾಗಿದೆ ಎಂದರು.
ಮೂರು ದಿನಗಳವರೆಗೆ ನಮ್ಮ ಎಲ್ಲ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡುತ್ತೇವೆ. ಮೇ 24 ರಂದು ಸರ್ಕಾರದ ಹೊಸ ನಿಯಮಾವಳಿ ಪ್ರಕಾರ ನಡೆದುಕೊಳ್ಳುವುದಾಗಿ ವರ್ತಕರು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಚಿದಾನಂದ ಮಠಪತಿ, ಶಿರಸ್ಥೆದಾರ ಸುಭಾಸಚಂದ್ರ ವಡವಡಗಿ, ಪುರಸಭೆ ಆರೋಗ್ಯ ನಿರೀಕ್ಷಕ ಮಹೇಶ ನಂದಿಕೇಶ್ವರಮಠ, ವರ್ತಕರಾದ ಶ್ರೀಕಾಂತ ಧಾರವಾಡ, ಮಹೇಶ ಬಿಜಾಪುರ, ಪುರಸಭೆ ಸದಸ್ಯ ಪ್ರಶಾಂತ ಜವಳಿ, ಮಂಜು ಬೆಳಗಲಿ, ಸುದರ್ಶನ ಮುರುಡಿ, ಶಿವು ಬಳಗೇರಿ, ಈರಣ್ಣ ನಾಗರಾಳ, ವೆಂಕಟೇಶ ಬಿಜಾಪುರ, ಹನಮಂತ ಬಿಜಾಪುರ, ರಾಘವೇಂದ್ರ ನಾರಾಯಣಕೇರಿ, ಈಶಪ್ಪ ಪಾನಗಂಟಿ ಮತ್ತಿತರರು ಇದ್ದರು.