ಗುಳೇದಗುಡ್ಡ ವಲಯದ ಮುಖ್ಯಗುರುಗಳ ಸಭೆ

ಗುಳೇದಗುಡ್ಡ, ಮೇ26: ಪ್ರಸಕ್ತಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಮೇ 29 ರಂದು ನಡೆಯಲಿದ್ದು, ಶಾಲಾ ಪ್ರಾರಂಭೋತ್ಸವವನ್ನು ಹಬ್ಬದಂತೆ ಆಚರಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೈ. ಕುಂದರಗಿ ಮುಖ್ಯಶಿಕ್ಷಕರಿಗೆ ಸೂಚಿಸಿದರು.
ಅವರು ನಗರದ ಭಂಡಾರಿ ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಗುಳೇದಗುಡ್ಡ ವಲಯದ ಮುಖ್ಯಶಿಕ್ಷಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಶಾಲೆಗಳಿಗೆ ಸುಣ್ಣ ಬಣ್ಣ ಹಚ್ಚಿ, ತಳಿರು ತೋರಣದಿಂದ ಅಲಂಕಾರ ಮಾಡಬೇಕು. ಶೈಕ್ಷಣಿಕ ಮಾರ್ಗಸೂಚಿಯಂತೆ ಕ್ರಿಯಾಯೋಜನೆ ತಯಾರಿಸಿ ಅನುಷ್ಠಾನ ಮಾಡಬೇಕು ಎಂದರು. ಇಲಾಖೆಯ ನಿಯಮಗಳು ಮತ್ತು ನಿರ್ವಹಿಸಬೇಕಾದ ದಾಖಲೆಗಳ ಬಗ್ಗೆ ಮಾಹಿತಿ ನೀಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎಂ. ಬಿ. ದೊಡ್ಡಪ್ಪನವರ ಮಾತನಾಡಿ, ಇಲಾಖೆಯ ಮಾರ್ಗಸೂಚಿಯಂತೆ ಕಾರ್ಯಕ್ರಮ ಮಕ್ಕಳಿಗೆ ಮೆನುವಿನಂತೆ ಬಿಸಿಯೂಟ ನೀಡಬೇಕು. ಮೊದಲ ದಿನ ಸಿಹಿಯೂಟ ನೀಡಬೇಕು. ಪ್ರತಿದಿನ ಬಿಸಿಯೂದ ಹಾಜರಾತಿಯನ್ನು ಮುಖ್ಯಶಿಕ್ಷಕರು ಎಸ್.ಎಂ.ಎಸ್.ಕಳುಹಿಸಬೇಕು. ದಾಖಲಾತಿ ಹೆಚ್ಚಳ ಮಾಡಬೇಕು. ದಾಖಲಾದ ಎಲ್ಲಾ ಮಕ್ಕಳು ಪೂರ್ಣಪ್ರಮಾಣದಲ್ಲಿ ಹಾಜರಾಗಬೇಕು. ಮಕ್ಕಳಿಗೆ ಸರಕಾರದ ಎಲ್ಲ ಯೋಜನೆಯ ಲಾಭ ದೊರಕಿಸಬೇಕು ಎಂದು ಸಲಹೆ ನೀಡಿದರು.
ವೇದಿಕೆಯ ಮೇಲೆ ದೈಹಿಕ ಪರಿವೀಕ್ಷಕ ಬಿ.ಎಚ್. ಹಳಗೇರಿ, ಶಿಕ್ಷಣ ಸಂಯೋಜಕ ಎಂ.ಸಿ. ನಾಲತವಾಡ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸಂಗಮೇಶ ಯಲಿಗಾರ, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೈ.ಎಸ್.ಮಜ್ಜಗಿ, ಸಿ.ಆರ್.ಪಿ. ಮಂಜುನಾಥ ಉಂಕಿ, ಮುಖ್ಯಶಿಕ್ಷಕ ಎಸ್.ಎಸ್. ಪಟ್ಟಣಶೆಟ್ಟಿ ಹಾಜರಿದ್ದರು. ಕಾರ್ಯಕ್ರಮದಲ್ಲಿ ಗುಳೇದಗುಡ್ಡ ಪೂರ್ವ, ಪಶ್ಚಿಮ, ಲಾಯದಗುಂದಿ & ಕೊಟೆಕಲ್ ಕ್ಲಸ್ಕರಿನ ಎಲ್ಲ ಸಮೂಹ ಸಂಪನ್ಮೂಲ ವ್ಯಕ್ತಿಗಳು, ಮುಖ್ಯಗುರುಗಳು ಉಪಸ್ಥಿತರಿದ್ದರು.