ಗುಳೇದಗುಡ್ಡ ಪುರಸಭೆ ಗದ್ದುಗೆ ಕಾಂಗ್ರೆಸ್ ಮಡಿಲಿಗೆ

ಗುಳೇದಗುಡ್ಡ ನ.11- ಪಟ್ಟಣದಲ್ಲಿ ನಡೆದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಪಡೆದುಕೊಂಡಿದ್ದಾರೆ.
ಅಧ್ಯಕ್ಷರಾಗಿ ಶಿಲ್ಪಾ ನಾಗರಾಜ ಹಳ್ಳಿ ಹಾಗೂ ಉಪಾಧ್ಯಕ್ಷರಾಗಿ ಶರೀಫಾ ಉಸ್ಮಾನಗಣಿ ಮಂಗಳೂರ ಅವರು ಆಯ್ಕೆಯಾಗುವ ಮೂಲಕ ಗುಳೇದಗುಡ್ಡ ಪುರಸಭೆಯನ್ನು ಮಹಿಳೆಯರು ತಮ್ಮದಾಗಿಸಿಕೊಂಡಿದ್ದಾರೆ.
ಗುಳೇದಗುಡ್ಡ ಪುರಸಭೆ ಒಟ್ಟು 23 ಸದಸ್ಯರಿದ್ದು, ಇದರಲ್ಲಿ ಕಾಂಗ್ರೆಸ್ 15 ಸ್ಥಾನಗಳೊಂದಿಗೆ ಪೂರ್ಣ ಬಹುಮತ ಪಡೆದುಕೊಂಡಿದೆ. ಜೆಡಿಎಸ್ 5, ಬಿಜೆಪಿ 2 ಹಾಗೂ ಪಕ್ಷೇತರ 1 ಸ್ಥಾನ ಹೊಂದಿದೆ. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ 4 ಜನರು ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ ಶಿಲ್ಪಾ ನಾಗರಾಜ ಹಳ್ಳಿ ಅವರು ಎರಡು ನಾಮಪತ್ರ, ಅದರಂತೆ ಜೆಡಿಎಸ್‍ನ ಜ್ಯೋತಿ ಗೋವಿನಕೊಪ್ಪ, ಸುಮಿತ್ರಾ ಕೊಡಬಳಿ ಅವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಮೂವರು ಸದಸ್ಯರು ನಾಮಪತ್ರ ಸಲ್ಲಿಸಿದ್ದು, ಶರೀಫಾ ಮಂಗಳೂರು ಅವರು 2 ನಾಮಪತ್ರ, ಅದರಂತೆ ಜೆಡಿಎಸ್‍ನ ರಾಜೇಶ್ವರಿ ಉಂಕಿ ಅವರು ಒಂದು ನಾಮಪತ್ರ ಸಲ್ಲಿಸಿದ್ದರು.
ಶಿಲ್ಪಾ ನಾಗರಾಜ ಹಳ್ಳಿ ಅವರಿಗೆ ಕಾಂಗ್ರೆಸ್‍ನ 15, ಪಕ್ಷೇತರ 1, ಶಾಸಕ ಸಿದ್ಧರಾಮಯ್ಯನವರ ಮತ ಸೇರಿ ಒಟ್ಟು 17 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರು. ಇನ್ನೂ ಜ್ಯೋತಿ ಗೋವಿನಕೊಪ್ಪ ಪರವಾಗಿ 5 ಮತಗಳು ಬಿದ್ದವು.
ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಶರೀಫಾ ಮಂಗಳೂರು ಅವರು ಕಾಂಗ್ರೆಸ್‍ನ 15, ಪಕ್ಷೇತರ 1, ಶಾಸಕ ಸಿದ್ಧರಾಮಯ್ಯನವರ ಮತ ಸೇರಿ ಒಟ್ಟು 17 ಮತಗಳನ್ನು ಪಡೆಯುವ ಮೂಲಕ ಉಪಾಧ್ಯಕ್ಷರಾಗಿ ಆಯ್ಕೆಯಾದರು. ರಾಜೇಶ್ವರಿ ಉಂಕಿ ಅವರಿಗೆ 5 ಮತಗಳು ಬಿದ್ದಿದ್ದರಿಂದ ಪರಾಭವಗೊಂಡರು.
ಮಾಜಿ ಸಿಎಂ ಬಾದಾಮಿ ಮತಕ್ಷೇತ್ರದ ಶಾಸಕ ಸಿದ್ದರಾಮಯ್ಯನವರು ಗುಳೇದಗುಡ್ಡ ಪುರಸಭೆಗೆ ಆಗಮಿಸಿ ಕಾಂಗ್ರೆಸ ಪಕ್ಷದ ಅಭ್ಯರ್ಥಿಗಳ ಪರವಾಗಿ ಕೈ ಎತ್ತುವುದುರ ಮೂಲಕ ಬೆಂಬಲ ಸೂಚಿಸಿದರು. ನಂತರ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಅವರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಎಚ್.ವೈ.ಮೇಟಿ, ಬಿ.ಬಿ.ಚಿಮ್ಮನಕಟ್ಟಿ, ಮುಖಂಡರಾದ ರಾಜು ಚಿಮ್ಮನಕಟ್ಟಿ, ಎಂ.ಬಿ.ಹಂಗರಗಿ, ಚಲವಾದಿ, ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ರಾಜು ಜವಳಿ, ಸಂಜಯ ಬರಗುಂಡಿ, ಕೆಪಿಸಿಸಿ ಹಿಂದುಳಿದ ವರ್ಗಗಳ ಕಾರ್ಯದರ್ಶಿ ಮಹೇಶ ಹೊಸಗೌಡ್ರ, ಪುರಸಭೆ ಮಾಜಿ ಅಧ್ಯಕ್ಷರಾದ ನಾಗಪ್ಪ ಗೌಡ್ರ, ವೈ.ಆರ್.ಹೆಬ್ಬಳ್ಳಿ, ಪ್ರಕಾಶ ಮುರಗೋಡ, ಜುಗಲಕಿಶೋರ ಭಟ್ಟಡ, ಐ.ಸಿ.ಯಂಡಿಗೇರಿ, ಪುರಸಭೆ ಸದಸ್ಯರಾದ ವಿನೋದ ಮದ್ದಾನಿ, ವಂದನಾ ಭಟ್ಟಡ, ರಫಿಕ್‍ಅಹಮ್ಮದ ಕಲಬುರ್ಗಿ, ರಾಜಶೇಖರ ಹೆಬ್ಬಳ್ಳಿ, ರಾಜವ್ವ ಹೆಬ್ಬಳ್ಳಿ, ಶ್ಯಾಮ ಮೇಡಿ, ನಾಗರತ್ನಾ ಲಕ್ಕುಂಡಿ, ವಿಠ್ಠಲಸಾ ಕಾವಡೆ, ಮುಖಂಡರಾದ ಗೋಪಾಲ ಭಟ್ಟಡ, ಸಾಗರ ಕೊಣ್ಣೂರ, ಪಕ್ಷೇತರ ಸದಸ್ಯ ಯಲ್ಲಪ್ಪ ಮನ್ನಿಕಟ್ಟಿ, ಬಿಜೆಪಿ ಸದಸ್ಯರಾದ ಪ್ರಶಾಂತ ಜವಳಿ, ಕಾಶಿನಾಥ ಕಲಾಲ, ಜೆಡಿಎಸ್ ಸದಸ್ಯರಾದ ಉಮೇಶ ಹುನಗುಂದ, ಜ್ಯೋತಿ ಗೋವಿನಕೊಪ್ಪ, ಸಂತೋಷ ನಾಯನೇಗಲಿ, ಸುಮಿತ್ರಾ ಕೋಡಬಳಿ, ರಾಜೇಶ್ವರಿ ಉಂಕಿ ಸೇರಿದಂತೆ ಇತರರು ಇದ್ದರು.