ಗುಳೇದಗುಡ್ಡದಲ್ಲಿ ಹೋಳಿ ಸಂಭ್ರಮ

ಗುಳೇದಗುಡ್ಡ, ಮಾ29: ಪಟ್ಟಣದ ಕೊರೊನಾದ ನಡುವೆಯು ಹೋಳಿ ಹಬ್ಬವನ್ನು ರವಿವಾರ ಸಂಭ್ರಮದಿಂದ ಆಚರಿಸಲಾಯಿತು. ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬಂದಿರುವ ಕಾಮರತಿಯರ ಮೆರವಣೆಗೆ ಜನರ ಗಮನ ಸಳೆಯಿತು.
ಈ ಬಾರಿ ಶೇ.30-40 ರಷ್ಟು ಜನರು ಮಾತ್ರ ಈ ಬಣ್ಣದ ಹೋಳಿ ಆಚರಣೆಯಲ್ಲಿ ತೊಡಗಿಕೊಂಡಿದ್ದರು. ಸಾಕಷ್ಟು ಜನರು ರಂಗಿನಾಟ ಹೋಳಿ ಆಚರಣಿ ಬಿಟ್ಟು ದೂರದ ಗೋವಾ, ದಾಂಡೇಲಿ ,ಕೊಲ್ಲಾಪುರ,ತಿರುಪತಿ, ಧರ್ಮಸ್ಥಳ ಸೇರಿದಂತೆ ಇನ್ನಿತರ ಪ್ರವಾಸಿ ತಾಣಗಳಿಗೆ ತೆರಳಿದರೇ ಇನ್ನೂ ಜನರು ಸಮೀಪದ ತೋಟಗಳಿಗೆ,ಹೊಲಗಳ ಕಡೆ ತೆರಳಿ ಸಮಯ ಕಳೆದರು.
ಪಟ್ಟಣದಲ್ಲಿ ಬೆಳಿಗ್ಗೆ ಚಿಕ್ಕ ಮಕ್ಕಳು ಹೋಳಿಯಾಟವಾಡಿ ಸಂಭ್ರಮಿಸಿದರು. ಮಧ್ಯಾಹ್ನ ಹೋಳಿ ರಂಗಿನ ಆಟ ಕಳೆಗೊಂಡಿತು.
ಸೋಗಿನ ಮೆರವಣೆಗೆ: ಸಂಜೆ 5 ಗಂಟೆಯಿಂದ ಪಟ್ಟಣದ ನಗ್ಲಿಪೇಟೆ ಮ್ಯಾಳದವರಿಂದ ಕಾಮರತಿಯರ ಸೋಗಿನ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಗಂಡಸರೇ ಹೆಣ್ಣಿನ ವೇಷ ಧರಿಸಿಕೊಂಡು ಅಳುವ ದೃಶ್ಯಗಳು ನೋಡುಗರನ್ನು ರಂಜಿಸಿದವು. ನಗರದ ವಿವಿಧ ಭಾಗಗಳಲ್ಲಿ ರಂಗಿನಾಟ ಬಲು ಜೋರಾಗಿತ್ತು. ಒಬ್ಬರಿಗೊಬ್ಬರು ರಂಗು ರಂಗಿನ ಬಣ್ಣಗಳನ್ನು ಎರಚಾಡಿ ಸಂಭ್ರಮಿಸಿದರು. ಅಣಕು ಹೆಣಗಳ ಮೋಜು ನೋಡಲು ಅಲ್ಲಲ್ಲಿ ಸಾಕಷ್ಟು ಜನರು ತಂಡೋಪತಂಡವಾಗಿ ನೋಡಿ ಖುಷಿ ಪಟ್ಟರು.