ಗುಳೆ ಹೋಗುವುದನ್ನು ತಡೆಯಲು ನರೇಗಾದಡಿ ಅತಿ ಹೆಚ್ಚು ಕೂಲಿಕಾರರಿಗೆ ಕೆಲಸ

ರಾಯಚೂರು,ಏ.೨೯- ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರ ಗುಳೆ ಹೋಗುವುದನ್ನು ತಡೆಯಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರಾಯಚೂರು ಜಿಲ್ಲೆಯಲ್ಲಿ ಪ್ರತಿ ನಿತ್ಯ ಲಕ್ಷಕ್ಕೂ ಹೆಚ್ಚು ಜನರಿಗೆ ಕೆಲಸ ನೀಡಿ ರಾಜ್ಯದಲ್ಲಿಯೇ ರಾಯಚೂರು ಜಿಲ್ಲೆಯು ಪ್ರಥಮ ಸ್ಥಾನದಲ್ಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ ನರೇಗಾ ಯೋಜನೆಯಡಿ ೯,೫೧,೬೭೩ ಕೂಲಿಕಾರರು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ರಾಯಚೂರು ಜಿಲ್ಲೆಯಲ್ಲೇ ಅತೀ ಹೆಚ್ಚು ಅಂದರೆ ೧,೧೨,೫೫೪ ಕೂಲಿಕಾರರಿಗೆ ಕೆಲಸ ನೀಡಿ ಪ್ರಥಮ ಸ್ಥಾನದಲ್ಲಿದೆ. ಇನ್ನೂ ಬೆಳಗಾವಿ ೧,೦೧,೯೭೨ (ದ್ವಿತೀಯ ಸ್ಥಾನ), ಕೊಪ್ಪಳ ೧,೦೧,೬೦೩ (ತೃತೀಯ ಸ್ಥಾನ), ಬಳ್ಳಾರಿ ೯೪,೫೭೧ (ನಾಲ್ಕನೇ ಸ್ಥಾನ), ಗದಗ ೮೬,೩೨೯ (ಐದನೇ ಸ್ಥಾನ) ಕೂಲಿಕಾರರಿಗೆ ಕೆಲಸ ನೀಡಿದೆ.
ಗುಳೆ ತಡೆಯುವಲ್ಲಿ ಯಶಸ್ವಿ: ಪ್ರತಿ ವರ್ಷ ಬೇಸಿಗೆ ಅವಧಿಯಲ್ಲಿ ರಾಯಚೂರು ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರಿಗೆ ತಮ್ಮ ಊರಲ್ಲಿ ಕೆಲಸವಿಲ್ಲದ ಕಾರಣದಿಂದಾಗಿ ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಶಿಧರ ಕುರೇರ ಅವರ ಮಾರ್ಗದರ್ಶನದಲ್ಲಿ ನರೇಗಾ ಯೋಜನೆಯಡಿ ಈ ಬಾರಿ ಐಇಸಿ ಚಟುವಟಿಕೆಯಡಿ ಹೆಚ್ಚು ಪ್ರಚಾರ ಕಾರ್ಯಕ್ರಮಗಳನ್ನು ಮಾಡಿ ಕೂಲಿಕಾರರಿಗೆ ನರೇಗಾದಿಂದ ಸಿಗುವ ಅಗತ್ಯ ಮಾಹಿತಿ ಒದಗಿಸಲಾಯಿತು.
೨೦೨೩ರ ಏ.೦೧ರಿಂದ ಕೇಂದ್ರ ಸರಕಾರವು ನರೇಗಾ ಕೂಲಿ ಮೊತ್ತವನ್ನು ೩೦೯ರಿಂದ ೩೧೬ರೂ.ಗೆ ಹೆಚ್ಚಳಮಾಡಿದೆ. ಈ ಬಗ್ಗೆ ಕೂಲಿಕಾರರಿಗೆ ಅರಿವು ಮೂಡಿಸಿ ಯೋಜನೆಯತ್ತ ಕರೆತಂದು ಎಲ್ಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲಸ ನೀಡಲಾಗುತ್ತಿದೆ. ಬೆಳಗಾವಿ ಹಾಗೂ ಕಲಬುರಗಿ ವಿಭಾಗ ವ್ಯಾಪ್ತಿಯ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಳ ಹಿನ್ನೆಲೆಯಲ್ಲಿ ನರೇಗಾ ಕೆಲಸದಲ್ಲಿ ಶೇ.೩೦ ರಿಯಾಯತಿ ಸೌಲಭ್ಯವನ್ನು ರಾಜ್ಯ ಸರಕಾರ ನೀಡಿದೆ. ಈ ಬಗ್ಗೆ ರಾಯಚೂರು ಜಿಲ್ಲೆಯ ಕೂಲಿಕಾರರಿಗೆ ಹೆಚ್ಚು ಮಾಹಿತಿ ನೀಡಿದ್ದರಿಂದ ಜನ ಗುಳೆ ಹೋಗುವುದನ್ನು ಬಿಟ್ಟು ನರೇಗಾದಡಿ ಇದ್ದೂರಲ್ಲೇ ಕೆಲಸ ಮಾಡಿಕೊಂಡು ನೆಮ್ಮದಿಯ ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಕೂಲಿಕಾರರಿಗೆ ಮತದಾನದ ಮಹತ್ವ: ರಾಯಚೂರು ಜಿಲ್ಲೆಯಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಮತದಾನ ಆದರೂ ಕೆಲ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮತದಾನ ಪ್ರಮಾಣ ಕಡಿಮೆ ಆಗಿತ್ತು. ಸದ್ಯ ನರೇಗಾದಡಿ ರಾಯಚೂರು ಜಿಲ್ಲೆಯ ೧೭೯ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಕೂಲಿಕಾರರು ಕೆರೆ ಅಭಿವೃದ್ಧಿ, ಕೃಷಿ ಹೊಂಡ, ಬದು ನಿರ್ಮಾಣ ಮತ್ತು ನಾಲಾ ಹೂಳೆತ್ತುವ ಕೆಲಸ ಮಾಡುತ್ತಿದ್ದಾರೆ. ಈ ಕಾಮಗಾರಿ ಸ್ಥಳಗಳಲ್ಲಿ ಕೂಲಿಕಾರರಿಗೆ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತಾಲೂಕು ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮ ಹಾಗೂ ಇವಿಎಂ, ವಿವಿಪ್ಯಾಟ್ ಬಳಕೆ ಕುರಿತು ಪ್ರಾತ್ಯಕ್ಷಿಕೆ ನೀಡಿ ಅಣಕು ಮತದಾನ ಮಾಡಿಸುವುದು, ಮತದಾನ ಜಾಗೃತಿ ಗೀತೆಗಳನ್ನು ಪ್ರಚುರ ಪಡಿಸುವುದು ಹಾಗೂ ಕೂಲಿಕಾರರಿಗೆ ಮತದಾನದ ಮಹತ್ವದ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಗುತ್ತಿದೆ. ಹೀಗೆ ವ್ಯಾಪಕ ಮತದಾನ ಜಾಗೃತಿ ಪ್ರಚಾರ ಹಿನ್ನೆಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೂ ರಾಯಚೂರು ಜಿಲ್ಲಾ ಪಂಚಾಯತ್ ಹೆಚ್ಚಿನ ಆಸಕ್ತಿ ವಹಿಸಿದೆ ಎಂದು ಹೇಳಿದರು.
ಜಿಪಂ ಸಿಇಓ ಪ್ರತಿಕ್ರಿಯೆ: ರಾಯಚೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಬೇಸಿಗೆ ಕಾಲದಲ್ಲಿ ಜನ ಕೆಲಸ ಹರಸಿ ಗುಳೆ ಹೋಗುತ್ತಿದ್ದರು. ಹೀಗಾಗಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಪರಿಣಾಮಕಾರಿ ಅನುಷ್ಠಾನದಿಂದ ರಾಜ್ಯದಲ್ಲಿಯೇ ರಾಯಚೂರು ಜಿಲ್ಲೆ ಹೆಚ್ಚು ಮಾನವ ದಿನಗಳ ಸೃಜನೆ ಮಾಡಲು ಅನುಕೂಲವಾಗಿದೆ. ನರೇಗಾದಿಂದ ಜನರ ಗುಳೆಯೂ ತಪ್ಪಿದೆ. ನರೇಗಾ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಕಳೆದ ಒಂದು ತಿಂಗಳಿಂದ ನಿರಂತರವಾಗಿ ಮಾಡುತ್ತಾ ಮತದಾನ ಮಹತ್ವ ತಿಳಿಸಲಾಗುತ್ತಿದೆ ಎಂದರು.
ಯೋಜನಾ ನಿರ್ದೇಶಕರು ಪ್ರತಿಕ್ರಿಯೆ: ಗ್ರಾಮೀಣ ಪ್ರದೇಶದ ಜನರಿಗೆ ನರೇಗಾ ಯೋಜನೆಯು ವರದಾನವಾಗಿದೆ. ರಾಯಚೂರು ಜಿಲ್ಲೆಯಲ್ಲಿ ಕೆಲಸ ಹರಿಸಿ ಬೇರೆ ರಾಜ್ಯಗಳಿಗೆ ಗುಳೆ ಹೋಗುವುದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ರಾಯಚೂರು ಜಿಲ್ಲೆಯಲ್ಲಿ ಅತೀ ಹೆಚ್ಚು ಕೂಲಿಕಾರರಿಗೆ ಕೆಲಸ ನೀಡುವ ಮೂಲಕ ರಾಜ್ಯದಲ್ಲಿಯೇ ರಾಯಚೂರು ಜಿಲ್ಲೆಯು ಪ್ರಥಮ ಸ್ಥಾನ ಲಭಿಸಿರುವುದಕ್ಕೆ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ಪ್ರಕಾಶ,ವಿ. ಅವರು ಸ್ವಾಗತಿಸಿದ್ದಾರೆ.